ಮಂಗಳೂರು: ಕಂಪೌಂಡ್ ಕುಸಿತ; ಮಣ್ಣಿನಡಿ ಸಿಲುಕಿ ಇಬ್ಬರು ಕಾರ್ಮಿಕರು ಮೃತ್ಯು

Update: 2020-02-28 17:29 GMT

ಮಂಗಳೂರು, ಫೆ.28: ನಗರದ ಕರಂಗಲ್ಪಾಡಿಯಲ್ಲಿ ತ್ರಿಸ್ಟಾರ್ ಹೊಟೇಲ್ ಕಟ್ಟಡದ ನಿರ್ಮಾಣ ಕಾಮಗಾರಿಯ ವೇಳೆ ತಡೆಗೋಡೆ ಸಮೇತ ಭೂಮಿ ಕುಸಿತಗೊಂಡ ಪರಿಣಾಮ ಇಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಮಸ್ತಿಗುಲ್ (25) ಹಾಗೂ ಬಾಗಲಕೋಟೆ ಮೂಲದ ಭೀಮೇಶ್(30) ಮೃತಪಟ್ಟ ಕಾರ್ಮಿಕರು. ಇನ್ನೋರ್ವ ಕಾರ್ಮಿಕ ಪಶ್ಚಿಮ ಬಂಗಾಳದ ಅನಿಗುಲ್(25) ಗಾಯಗೊಂಡಿದ್ದಾರೆ. ಮಣ್ಣಿನಡಿ ಸಿಲುಕಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಒಟ್ಟು ಆರು ಮಂದಿ ಕಾರ್ಮಿಕರು ಜೊತೆಗೂಡಿ ಕೆಲಸ ಮಾಡುತ್ತಿದ್ದರು. ಏಕಾಏಕಿ ತಡೆಗೋಡೆ ಸಹಿತ ಭೂಮಿ ಕುಸಿದಾಗ ಮೂವರು ಓಡಿ ಜೀವ ಉಳಿಸಿಕೊಂಡರೆ, ಉಳಿದ ಮೂವರು ಮಣ್ಣಿನಡಿ ಸಿಲುಕಿಕೊಂಡರು. ತಕ್ಷಣ ಅನಿಲ್‌ಗುಲ್‌ನನ್ನು ಮಣ್ಣಿನಡಿಯಿಂದ ಹೊರಗೆಳೆದು ಪಾರು ಮಾಡಿದರೆ, ಮಸ್ತಿಗುಲ್ ಮತ್ತು ಭೀಮೇಶ್ ಮಣ್ಣಿನಡಿ ಸಿಲುಕಿ ಪ್ರಾಣ ಕಳಕೊಂಡರು. ಅಗ್ನಿಶಾಮಕದಳದ ಸಿಬ್ಬಂದಿ ವರ್ಗವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರೂ ಕೂಡ ಇಬ್ಬರ ಜೀವ ಜೀವ ಉಳಿಸಿಕೊಳ್ಳಲಾಗಲಿಲ್ಲ.

ಉದ್ಯಮಿ ಎ.ಜೆ.ಶೆಟ್ಟಿಯ ಪತ್ನಿ ಶಾರದಾ ಶೆಟ್ಟಿ ಮಾಲಕತ್ವದ ತ್ರಿಸ್ಟಾರ್ ಹೊಟೇಲ್ ಕಟ್ಟಡದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿತ್ತು. ದುರಂತ ನಡೆದ ತಕ್ಷಣ ಕಟ್ಟಡದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಮಧ್ಯಾಹ್ನ 1 ಗಂಟೆಯ ವೇಳೆಗೆ ತಡೆಗೋಡೆ ಸಮೇತ ಭೂ ಕುಸಿದಿತ್ತು. ಘಟನೆ ನಡೆದ 10 ನಿಮಿಷದಲ್ಲೇ ಪಾಂಡೇಶ್ವರ ಮತ್ತು ಕದ್ರಿ ಅಗ್ನಿಶಾಮಕದಳವು ಸ್ಥಳಕ್ಕೆ ಆಗಮಿಸಿದೆ. ಸ್ಥಳದಲ್ಲಿದ್ದ ಜೆಸಿಬಿಯಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಯಿತು. 1:10ಕ್ಕೆ ಆರಂಭವಾದ ಕಾರ್ಯಾಚರಣೆ 2:40ಕ್ಕೆ ಮುಕ್ತಾಯಗೊಂಡಿತು. ಒಟ್ಟಿನಲ್ಲಿ ಮಣ್ಣಿನಡಿ ಸಿಲುಕಿದ ಇಬ್ಬರನ್ನು ಹೊರತೆಗೆಯಬೇಕಾದರೆ ಒಂದುವರೆ ಗಂಟೆಗಳ ಕಾರ್ಯಾಚರಣೆ ನಡೆಸಬೇಕಾಯಿತು.

ಘಟನಾ ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್, ನೂತನ ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಗರ ಪೊಲೀಸ್ ಆಯುಕ್ತ ಡಾ.ಹರ್ಷ, ಪ್ರಭಾರ ಡಿಸಿಪಿ ಚೇತನ್ ಆರ್., ಎಸಿಪಿ ಮಂಜುನಾಥ ಶೆಟ್ಟಿ, ತಹಸಿಲ್ದಾರ್ ಗುರು ಪ್ರಸಾದ್, ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ, ನಗರ ಪಾಲಿಕೆ ಜಂಟಿ ನಿರ್ದೇಶಕ ಜಯರಾಜ್, ನಗರ ಯೋಜನಾಧಿಕಾರಿ ಬಾಲಕೃಷ್ಣ ಮತ್ತಿತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಗೆ ಸಂಬಂಧಿಸಿ ಕಟ್ಟಡದ ಮಾಲಕಿ ಶಾರದಾ ಜೆ.ಶೆಟ್ಟಿ ಹಾಗೂ ಗುತ್ತಿಗೆದಾರ ಕಿಶೋರ್ ಕುಮಾರ್ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಊಟಕ್ಕಾಗಿ ಸಿದ್ಧತೆ, ಆದರೆ...
ಬಹುಮಹಡಿಯ ತ್ರಿಸ್ಟಾರ್ ಹೊಟೇಲ್ ಕಟ್ಟಡದ ಕಾಮಗಾರಿಯು ನಾಲ್ಕು ತಿಂಗಳ ಹಿಂದೆ ಆರಂಭಗೊಂಡಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳ 100ಕ್ಕೂ ಅಧಿಕ ಕಾರ್ಮಿಕರು ಇದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಟ್ಟಡದ ಎರಡು ಪಾರ್ಶ್ವಗಳಲ್ಲಿ ತಡೆಗೋಡೆ ಕಾಮಗಾರಿ ಮುಕ್ತಾಯಗೊಂಡಿತ್ತು. ಇನ್ನೊಂದು ಭಾಗದಲ್ಲಿ ಮಾತ್ರ ತಡೆಗೋಡೆ ಕಾಮಗಾರಿ ಅರ್ಧದಷ್ಟು ಆಗಿತ್ತು. ಉಳಿದ ಅರ್ಧ ಭಾಗ ಕಾಮಗಾರಿ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ 12.45ಕ್ಕೆ ಕಾರ್ಮಿಕರು ಕೆಲಸ ಮುಗಿಸಿ ಊಟಕ್ಕೆ ಹೊರಡುವವರಿದ್ದರು. ಆದರೆ ತಡೆಗೋಡೆ ಕಾಮಗಾರಿ ಕೈಗೊಂಡಿದ್ದನ್ನು ಪೂರ್ತಿಗೊಳಿಸಿ ವಿಶ್ರಾಂತಿಗೆ ತೆರಳಲು ನಿರ್ಧರಿಸಿದ್ದರು ಎನ್ನಲಾಗಿದೆ. ಅದಕ್ಕಿಂತ ಮುನ್ನವೇ ಈ ದುರಂತ ಸಂಭವಿಸಿದ್ದು, ಇಬ್ಬರು ಪ್ರಾಣ ಕಳಕೊಂಡಿದ್ದಾರೆ.

ಭೂಮಿ-ತಡೆಗೋಡೆ ಮತ್ತಷ್ಟು ಕುಸಿಯುವ ಭೀತಿ

ತಡೆಗೋಡೆ ಸಹಿತ ಭೂಮಿ ಕುಸಿದು ಇಬ್ಬರನ್ನು ಬಲಿತೆಗೆದುಕೊಂಡಿರುವ ಸ್ಥಳವು ಮತ್ತಷ್ಟು ಕುಸಿಯುವ ಭೀತಿಯಲ್ಲಿದೆ. ಭೂಮಿ ಕುಸಿದ ಸ್ಥಳದಲ್ಲಿ ಜೇಡಿ ಮಣ್ಣು ಕಂಡುಬಂದಿದ್ದು, ಸಹಜವಾಗಿ ಕಾಮಗಾರಿಯ ವೇಗ ಹಾಗೂ ಕಂಪನಕ್ಕೆ ಭೂಮಿ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಕಟ್ಟಡ ನಿರ್ಮಿಸುವ ಜಾಗದಲ್ಲಿ 30 ಅಡಿಗೂ ಅಧಿಕ ಆಳಕ್ಕೆ ಕೊರೆಯಲಾಗಿದೆ. ದುರ್ಘಟನೆ ಸಂಭವಿಸಿದ ಜಾಗದಲ್ಲಿ 6 ಅಡಿ ಆಳಕ್ಕೆ ಮಣ್ಣು ಕುಸಿದಿದೆ. ಅದರಡಿ ಸಿಲುಕಿದ ಕಾರ್ಮಿಕರನ್ನು ಜೆಸಿಬಿ ಬಳಸಿ ಅಗ್ನಿಶಾಮಕ ಸಿಬ್ಬಂದಿಯು ಪತ್ತೆ ಮಾಡಿದ್ದರು. ಈ ಮಧ್ಯೆ ವಿದ್ಯುತ್ ಕಂಬವು ನೆಲಕ್ಕುರುಳಿವೆ. ಒಳಚರಂಡಿಯ ಪೈಪ್ ಒಡೆದು ಕೊಳಚೆ ನೀರು ಹರಿಯುತ್ತಿದೆ. ಭೂಗತ ಕೇಬಲ್‌ಗಳಿಗೂ ಹಾನಿಯಾಗಿದೆ. ತಡೆಗೋಡೆ ನಿರ್ಮಿಸಿದರೂ ಕೂಡ ಮಳೆಗಾಲದಲ್ಲಿ ಮತ್ತೆ ಕುಸಿದ ಭೀತಿಯನ್ನು ನಿರಾಕರಿಸುವಂತಿಲ್ಲ ಎಂದು ಪಾಲಿಕೆ ಇಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ತಡೆಗೋಡೆ ಸಹಿತ ಭೂಮಿ ಕುಸಿದ ಜಾಗದ ಸಮೀಪದ ಕಟ್ಟಡವು ಅಪಾಯವನ್ನು ಎದುರಿಸುವಂತಾಗಿದೆ. ಮಳೆಗಾಲದಲ್ಲಿ ಮತ್ತೆ ಮಣ್ಣು ಸಡಿಲಗೊಂಡರೆ, ಈ ಕಟ್ಟಡಕ್ಕೆ ಅಪಾಯವಿದೆ ಎಂದು ಹೇಳಲಾಗುತ್ತಿದೆ. ಈ ಕಟ್ಟಡದ ಹಿಂಬದಿಯಲ್ಲಿ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯೂ ಇದೆ. ಈ ಶಾಲೆಯ ಆಟದ ಮೈದಾನದ ಕಾಂಪೌಂಡ್‌ಗೆ ಈ ಕಟ್ಟಡದ ತಡೆಗೋಡೆ ತಾಗಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸೆಟ್‌ಬ್ಯಾಕ್ ಇಲ್ಲ?

ಬಹುಮಹಡಿ ಕಟ್ಟಡ ನಿರ್ಮಾಣ ವೇಳೆ ನಿಯಮಾನುಸಾರ ಸೆಟ್‌ಬ್ಯಾಕ್ ಬಿಡಬೇಕು. ಅಂದರೆ ಅಗ್ನಿಶಾಮಕದಳ ಸುತ್ತಲೂ ಸಂಚರಿಸುವಷ್ಟು ನಿಗದಿತ ಸ್ಥಳಾವಕಾಶ ಇರಬೇಕು ಎಂಬ ನಿಯಮ ಇದೆ. ಆದರೆ ಈ ಕಟ್ಟಡ ಸುತ್ತ ಅಂತಹ ಜಾಗವಿಲ್ಲ. ಸೆಟ್‌ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣವಾದರೆ ಇಂತಹ ಅನಾಹುತ ಸಂಭವಿಸಿದರೆ, ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತದೆ. ಆದರೆ ಇಲ್ಲಿ ಕಟ್ಟಡ ನಿರ್ಮಾಣದ ಎಲ್ಲ ನಿಯಮಗಳನ್ನು ಪಾಲಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ನಿರಾಕರಿಸುತ್ತಾರೆ. ನಿಗದಿತ ಸೆಟ್‌ಬ್ಯಾಕ್ ಬಿಟ್ಟಿದ್ದಾರೆ. ಅಗ್ನಿಶಾಮಕ ವಾಹನದಿಂದ ಐದು ಮಹಡಿವರೆಗೆ ಮಾತ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ. ಅದಕ್ಕೆ ಅನುಕೂಲವಾಗುವಂತೆ ಸೆಟ್‌ಬ್ಯಾಕ್ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.

ದುರಂತದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಎಲ್ಲ ವಿಧದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸುವಂತೆ ಶಾಸಕ ವೇದವ್ಯಾಸ ಕಾಮತ್ ಮನಪಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಅಧಿಕಾರಿಗಳು ಸುರಕ್ಷಾ ವಿಧಾನದ ಬಗ್ಗೆ ಪರಿಶೀಲನೆ ನಡೆಸಿದ ಇಂತಹ ಅನಾಹುತ ನಡೆಯುತ್ತಿರಲಿಲ್ಲ ಎಂದ ಕಾಮತ್, ಕಾಮಗಾರಿ ನಡೆಯುವ ಸ್ಥಳವನ್ನು ಇಂಜಿನಿಯರ್‌ಗಳು ಖುದ್ದು ಪರಿಶೀಲನೆ ನಡೆಸಬೇಕು. ಆ ಬಳಿಕವೇ ಕಟ್ಟಡ ನಿರ್ಮಿಸಲು ಅವಕಾಶ ನೀಡಬೇಕು. ಸರಿಯಾಗಿ ಪರಿಶೀಲನೆ ನಡೆಸದೆ ದುರಂತಕ್ಕೆ ಕಾರಣವಾದರೆ, ಅದಕ್ಕೆ ಆಯಾ ಇಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತನಿಖೆಗೆ ಡಿವೈಎಫ್‌ಐ ಆಗ್ರಹ

ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭ ನಡೆದ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಪ್ರಾಣ ಕಳೆದುಕೊಂಡ ವಲಸೆ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News