ಬರಲಿದೆ ಸಹಜ ಬಣ್ಣಗಳಲ್ಲಿ ಪರಿಸರ ಸ್ನೇಹಿ ‘ಉಡುಪಿ ಸೀರೆ’

Update: 2020-02-28 09:23 GMT

ಮುಲ್ಕಿ, ಫೆ.28: ಕದಿಕೆ ಟ್ರಸ್ಟ್ ನ  ‘ಉಡುಪಿ ಸೀರೆ ಉಳಿಸಿ’ ಅಭಿಯಾನದ ಅಂಗವಾಗಿ ಸಹಜ ಬಣ್ಣಗಳ ಕಾರ್ಯಾಗಾರ ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ  ಸಹಕಾರಿ ಸಂಘದಲ್ಲಿ ಇತ್ತೀಚಿಗೆ ನಡೆಯಿತು.

ಗುಜರಾತ್ ನ ವೇಡ್ಚಿಯ ಗಾಂಧಿವಾದಿ ಡಾ.ಸಂಘಮಿತ್ರ  ದೇಸಾಯಿ ಗಾಡೇಕರ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗಾಂಧೀಜಿಯವರ ಆಪ್ತ ಸಹಾಯಕರಾಗಿದ್ದ ಮಹಾದೇವ ದೇಸಾಯಿಯವರ ಮೊಮ್ಮಗಳಾಗಿರುವ ಇವರು ಖಾದಿ ಮತ್ತು ಸಹಜ ಬಣ್ಣ ಕ್ಷೇತ್ರದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ.

ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆ ಮತ್ತು ತ್ಯಾಜ್ಯ ವಸ್ತುಗಳಿಂದ ಅತ್ಯಾಕರ್ಷಕ ಪರಿಸರ ಸ್ನೇಹಿ ಸಹಜ ಬಣ್ಣಗಳನ್ನು ತಯಾರಿಸುವ ವಿಧಾನವನ್ನು ಇವರು ತಿಳಿಸಿಕೊಟ್ಟರು.

ಇತ್ತೀಚೆಗೆ ಕಟೀಲು ದೇವಸ್ಥಾನದಲ್ಲಿ ಬಳಸಲಾಗಿದ್ದ ಗೊಂಡೆ ಹೂಗಳು, ಹೋಟೆಲುಗಳಲ್ಲಿ ಉಪಯೋಗಿಸಿದ ದಾಳಿಂಬೆ ಸಿಪ್ಪೆ, ಬೇಂಗಾ, ಕೊಂದೆ ಇತ್ಯಾದಿ ಮರಗಳ ಕೆತ್ತೆ, ಹಲಸಿನ ಮರದ ಗರಗಸ ಪುಡಿ, ನೋನಿ ಗಿಡದ ಬೇರು ಮತ್ತು ನೀಲಿ ಮರದ ಬಣ್ಣ, ಹಳೆಯ ಕಬ್ಬಿಣ ಇತ್ಯಾದಿಗಳನ್ನ ಉಪಯೋಗಿಸಿ ಬಣ್ಣಗಳನ್ನು ತಯಾರಿಸುವ ಕಲೆಯನ್ನು ಈ ಶಿಬಿರದಲ್ಲಿ ಕಲಿಸಲಾಯಿತು.

ಈ ಕಾರ್ಯಾಗಾರದಲ್ಲಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ ಇದರ ಸಂತೋಷ ಕೌಲಗಿ, ಮೈಸೂರಿನ ಕಲಾವಿದ ಸಚ್ಚಿದಾನಂದ ಕೆ.ಜೆ., ತಾಳಿಪಾಡಿ ನೇಕಾರ ಸಂಘದ ಮುಖ್ಯ ಬಣ್ಣಗಾರ ವಾಸುದೇವ ಶೆಟ್ಟಿಗಾರ ಮತ್ತು ಅನೇಕ ಆಸಕ್ತರು ಭಾಗವಹಿಸಿದ್ದರು.

ಅದಮಾರು ಮಠದ ಆನಂದ ತುಳಸಿ ವನ ಟ್ರಸ್ಟ್ ಈ ಕಾರ್ಯಾಗಾರದ ಸಹ ಪ್ರಾಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News