ದಿಲ್ಲಿ ಹಿಂಸಾಚಾರ: ಮನೆಗೆ ನುಗ್ಗಿ ತುಂಬು ಗರ್ಭಿಣಿಯ ಹೊಟ್ಟೆಗೆ ತುಳಿದ ದುಷ್ಕರ್ಮಿಗಳು

Update: 2020-02-28 13:21 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಕರಾವಲ್‍ ನಗರದಲ್ಲಿ ಸೋಮವಾರ ರಾತ್ರಿ ಉದ್ರಿಕ್ತ ಗುಂಪಿನಲ್ಲಿದ್ದ ದುಷ್ಕರ್ಮಿಗಳು ಹೊಟ್ಟೆಗೆ ಒದ್ದರೂ ತುಂಬು ಗರ್ಭಿಣಿ 30 ವರ್ಷದ ಶಬಾನಾ ಪರ್ವೀನ್ ಪವಾಡವೆಂಬಂತೆ ಯಾವುದೇ ಸಮಸ್ಯೆಯಿಲ್ಲದೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಪರ್ವೀನ್ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ಗುಂಪು ಅವರ ಮನೆಗೆ ನುಗ್ಗಿ ಅವರ ಮೇಲೆ ದಾಳಿಗೈದು ಮನೆಗೆ ಬೆಂಕಿ ಹಚ್ಚಿತ್ತು.

ಆ ಭಯಾನಕ ಘಟನೆಯನ್ನು ನೆನಪಿಸಿಕೊಂಡ ಪರ್ವೀನ್ ಅತ್ತೆ ನಸೀಮಾ, "ಅವರು ನಮ್ಮ ಧರ್ಮವನ್ನು ನಿಂದಿಸಿದರು, ನನ್ನ ಪುತ್ರನಿಗೆ ಹೊಡೆದರು. ಅವರಲ್ಲಿ ಕೆಲವರು ನನ್ನ ಸೊಸೆಯ ಹೊಟ್ಟೆಯನ್ನೇ ತುಳಿದರು. ಆಕೆಯ ರಕ್ಷಣೆಗೆ ನಾವು ಧಾವಿಸುತ್ತಿದ್ದಂತೆ ಅವರು ನನ್ನ ಮೇಲೆ ದಾಳಿಗೈದರು, ನಾವು ಬದುಕುಳಿಯುವುದಿಲ್ಲ ಎಂದು ಆ ರಾತ್ರಿ ಅಂದುಕೊಂಡೆವು. ದೇವರ ದಯೆಯಿಂದ ದಾಳಿಕೋರರಿಂದ ತಪ್ಪಿಸಿಕೊಂಡೆವು'' ಎಂದು ಹೇಳುತ್ತಾರೆ.

"ನಾವು ಪರ್ವೀನ್‍ ಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿನ ವೈದ್ಯರು ಅಲ್-ಹಿಂದ್ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಆಕೆ ಗಂಡು ಮಗುವಿಗೆ ಬುಧವಾರ ಜನ್ಮ ನೀಡಿದ್ದಾಳೆ'' ಎಂದು ಆಕೆ ತಿಳಿಸಿದರು.

ದಾಳಿಯಿಂದ ಕಂಗೆಟ್ಟ ಕುಟುಂಬಕ್ಕೆ  ಮಗುವಿನ ಆಗಮನ ಸಂತಸ ನೀಡಿದೆಯಾದರೂ, ಪರ್ವೀನ್ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಎಲ್ಲಿಗೆ ಹೋಗುವುದೆಂದು ಕುಟುಂಬಕ್ಕೆ ತಿಳಿಯದಾಗಿದೆ. "ಅಲ್ಲಿ ನಮಗೇನೂ ಉಳಿದಿಲ್ಲ, ನಾವು ಯಾವುದಾದರೂ ಸಂಬಂಧಿಕರ ಮನೆಗೆ ಹೋಗಬೇಕಾದೀತು" ಎಂದು ಆಕೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News