ನೀರಿನ ದರ ಏರಿಕೆ ಬಗ್ಗೆ ಗಾಬರಿ ಬೇಡ: ನೂತನ ಮಂಗಳೂರು ಮೇಯರ್ ಅಭಯ

Update: 2020-02-28 11:35 GMT

ಮಂಗಳೂರು, ಫೆ.28: ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಏರಿಕೆಯಾಗಿರುವ ಕುಡಿಯುವ ನೀರಿನ ದರ ಹೆಚ್ಚಳಕ್ಕೆ ಸಂಬಂಧಿಸಿ ಮಂಗಳೂರು ನಾಗರಿಕರಿಗೆ ಗಾಬರಿ ಬೇಡ ಎಂದು ನೂತನ ಮೇಯರ್ ದಿವಾಕರ್ ಪಾಂಡೇಶ್ವರ ಅಭಯ ನುಡಿದಿದ್ದಾರೆ.

ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಅವರು ಇಂದು ಸುದ್ದಿಗಾರರ ಜತೆಗಿನ ತಮ್ಮ ಪ್ರಥಮ ಹೇಳಿಕೆಯಲ್ಲೇ, ಸಂಸದರು, ಶಾಸಕರು ಹಾಗೂ ಪಾಲಿಕೆಯ ಹಿರಿಯ ಸದಸ್ಯರ ಜತೆ ಚರ್ಚಿಸಿ ಮುಂದಿನ ಸಭೆಯಲ್ಲೇ ನೀರಿನ ದರ ಏರಿಕೆ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾಮಾನ್ಯ ಕಾರ್ಯಕರ್ತನಾಗಿದ್ದ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷಕ್ಕೆ ಚಿರಋಣಿ ಎಂದ ಅವರು, ಪಕ್ಷದ ಹಿರಿಯ ನಾಯಕರಿಗೆ ವಂದನೆ ಸಲ್ಲಿಸಿದರು. ಪಾಲಿಕಯಲ್ಲಿ ವಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮಗೆ ದೊರಕಿರುವ ವಿಶ್ವಾಸ, ಪ್ರೀತಿಗೆ ಕಪ್ಪುಚುಕ್ಕೆ ಬರದಂತೆ ಮಂಗಳೂರು ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ವ್ಯಾಪಾರ ಪರವಾನಿಗೆಯಲ್ಲಿ ತ್ಯಾಜ್ಯ ಶುಲ್ಕ ಹೆಚ್ಚಿರುವ ಬಗ್ಗೆಯೂ ದೂರು ಇದ್ದು, ಈ ಬಗ್ಗೆಯೂ ಸಹ ಕ್ರಮ ಕೈಗೊಳ್ಳುವುದಾಗಿ ನೂತನ ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದರು.

ಉಪ ಮೇಯರ್ ವೇದಾವತಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತಳಾಗಿದ್ದ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷ ಹಾಗೂ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರಲ್ಲದೆ, ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದಾಗಿ ಭರವಸೆ ನೀಡಿದರು.


ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನೇರವಾಗಿ ಚೇಂಬರ್‌ಗೆ ಬನ್ನಿ!

ತಿಂಗಳಿಗೊಮ್ಮೆ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಚರ್ಚಿಸಲು ಸಮಯ ವ್ಯರ್ಥ ಮಾಡದಂತೆ ಸದಸ್ಯರಲ್ಲಿ ಮನವಿ ಮಾಡಿದ ನೂತನ ಮೇಯರ್ ದಿವಾಕರ ಪಾಂಡೇಶ್ವರ, ಅಂತಹ ಸಮಸ್ಯೆಗಳನ್ನು ನೇರವಾಗಿ ತನ್ನ ಚೇಂಬರ್‌ನಲ್ಲಿಯೇ ತಿಳಿಸಿದರೆ ಕ್ರಮ ವಹಿಸಲಾಗುವುದು. ಸದನದಲ್ಲಿ ಅಭಿವೃದ್ದಿ ಕುರಿತಾದ ಚರ್ಚೆಗೆ ಗಮನ ಹರಿಸೋಣ ಎಂದು ಅವರು ಮನವಿ ಮಾಡಿದರು.


ಪ್ರತಿದಿನ ತಲಾ 5 ವಾರ್ಡ್‌ಗಳಿಗೆ ಭೇಟಿ

ಪಾಲಿಕೆಯ ಎಲ್ಲಾ ಸದಸ್ಯರ ದೂರುಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿದಿನ ತಲಾ 5 ವಾರ್ಡ್‌ಗಳಂತೆ ಭೇಟಿ ನೀಡಿ ದೂರುಗಳಿಗೆ ಸ್ಪಂದಿಸಲಿದ್ದೇನೆ. ದಿವಾಕರ ಪಾಂಡೇಶ್ವರ, ನೂತನ ಮೇಯರ್, ಮನಪಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News