‘ಹೊಸ ದಿಗಂತ’ನೂತನ ಕಚೇರಿ ಉದ್ಘಾಟನೆ

Update: 2020-02-28 12:32 GMT

ಮಂಗಳೂರು, ಫೆ. 28: ನಗರದ  ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ‘ಮಿಕಾಸ’ ಕಟ್ಟಡದಲ್ಲಿ ಗುರುವಾರ ‘ಹೊಸ ದಿಗಂತ’ ನೂತನ ಕಚೇರಿ ಉದ್ಘಾಟನೆಗೊಂಡಿದ್ದು, ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಪತ್ರಿಕೆಗಳಲ್ಲಿ ರಾಷ್ಟ್ರಪ್ರೇಮಕ್ಕೆ ಪ್ರೇರೇಪಣೆ ನೀಡುವ ವರದಿಗಳು ಹೆಚ್ಚಾಗಿ ಪ್ರಕಟವಾಗಬೇಕು. ಲಾಭದಾಯಕ ನೆಲೆಯ ಏಕಮುಖ ವರದಿಗಳು ದೇಶಕ್ಕೇ ಅಪಾಯ ಎಂದವರು ಹೇಳಿದರು.

ಅನೇಕ ಪತ್ರಿಕೆಗಳು , ಮಾಧ್ಯಮಗಳು ಇಂದು ಪತ್ರಿಕಾ ರಂಗಕ್ಕೆ ಕಪ್ಪು ಚುಕ್ಕೆ ಎಂಬಂತೆ ಬೆಳೆಯುತ್ತಿವೆ. ಕೇವಲ ಉದ್ಯಮವನ್ನೇ ಮುಖ್ಯವಾಗಿರಿಸಿ ಪತ್ರಿಕೆಗಳು ತಮ್ಮ ಧ್ಯೇಯೋದ್ದೇಶಗಳನ್ನು ಮರೆತರೆ ಅದು ಸಮಾಜಕ್ಕೆ ಅಪಾಯಕಾರಿ. ಸಮಾಜ-ರಾಷ್ಟ್ರಹಿತ ಮರೆತು ಲಾಭದ ದೃಷ್ಟಿಕೋನದ ಏಕಮುಖ ವರದಿಗಳಿಂದ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಗುರುತಿಸುವುದೇ ಕಷ್ಟಾಧ್ಯವಾದ ಪರಿಸ್ಥಿತಿ ಇದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಸರಕಾರ್ಯವಾಹ ಸಿ.ಆರ್.ಮುಕುಂದ್ ಮಾತನಾಡಿ, ‘‘ಹೊಸದಿಗಂತ ’’ ಪತ್ರಿಕೆ ಇಂದು ಸ್ವಂತ ಕಟ್ಟಡದಲ್ಲಿ ಮುಂದುವರಿಯುತ್ತಿರುವುದು ಸಂತಸದ ವಿಷಯ ಎಂದರು.

ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಉದ್ಘಾಟಿಸಿದರು. ಜ್ಞಾನ ಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ರವೀಂದ್ರ ಪೈ, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮುಖ್ಯ ಪ್ರಬಂಧಕ ವೆಂಕಟಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜ್ಞಾನ ಭಾರತಿ ಪ್ರಕಾಶನದ ನಿರ್ದೆಶಕರಾದ ಜಿ.ವಿ.ಕೃಷ್ಣ, ಪ್ರೊ.ಎಂ.ಬಿ.ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಪಾಲ್ಗೊಂಡಿದ್ದರು.

ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಂಗಳೂರು ವಿಭಾಗ ಮುಖ್ಯಸ್ಥ ಕೆ.ಆನಂದ ಶೆಟ್ಟಿ ವಂದಿಸಿದರು. ಹೊಸದಿಗಂತ ನಿರ್ದೇಶಕರಾದ ದು.ಗು.ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News