ಅಂಕಿತ್ ಶರ್ಮಾರನ್ನು ಹಲವಾರು ಬಾರಿ ಇರಿದು ಕೊಲ್ಲಲಾಗಿತ್ತು: ಮರಣೋತ್ತರ ಪರೀಕ್ಷಾ ವರದಿ

Update: 2020-02-28 14:31 GMT

ಹೊಸದಿಲ್ಲಿ,ಫೆ.28: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ಸಂಸ್ಥೆ (ಐಬಿ)ಯ ಭದ್ರತಾ ಸಹಾಯಕ ಅಂಕಿತ್ ಶರ್ಮಾ ಅವರನ್ನು ಹಲವಾರು ಬಾರಿ ಬರ್ಬರವಾಗಿ ಇರಿದು ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯು ಬಹಿರಂಗಗೊಳಿಸಿದೆ.

2017ರಿಂದ ಐಬಿ ಉದ್ಯೋಗಿಯಾಗಿದ್ದ ಶರ್ಮಾ ಮೃತದೇಹವು ಅವರು ವಾಸವಾಗಿದ್ದ ಹಿಂಸಾಗ್ರಸ್ತ ಚಾಂದಬಾಗ್ ಬಡಾವಣೆಯ ಮೋರಿಯೊಂದರಲ್ಲಿ ಪತ್ತೆಯಾಗಿತ್ತು.

 ಮಂಗಳವಾರ ಸಂಜೆ 5:30ರ ಸುಮಾರಿಗೆ ಕಚೇರಿಯಿಂದ ಮನೆಗೆ ವಾಪಸಾಗಿದ್ದ ಶರ್ಮಾ ಪ್ರದೇಶದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಯಲು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಗುಂಪೊಂದು ಅವರನ್ನು ಹಿಡಿದು ಚೂರಿಗಳಿಂದ ಇರಿದು ಹತ್ಯೆಗೈದು ಶವವನ್ನು ಮೋರಿಯಲ್ಲೆಸೆದಿತ್ತು ಎಂದು ಪೊಲೀಸರು ತಿಳಿಸಿದರು.

‘ರಾತ್ರಿಯಾದರೂ ಅಂಕಿತ್ ಮನೆಗೆ ಮರಳದಿದ್ದಾಗ ನಾವು ಆತನಿಗಾಗಿ ಹುಡುಕಾಟ ಆರಂಭಿಸಿದ್ದೆವು. ಗಾಯಾಳುಗಳನ್ನು ದಾಖಲಿಸಲಾಗಿದ್ದ ಜಿಟಿಬಿ ಮತ್ತು ಲೋಕನಾಯಕ ಆಸ್ಪತ್ರೆಗಳಲ್ಲಿಯೂ ಆತನಿಗಾಗಿ ಹುಡುಕಾಡಿದ್ದೆವು. ಬುಧವಾರ ನಸುಕಿನ 3:30ರವರೆಗೂ ನಮ್ಮ ಶೋಧ ಮುಂದುವರಿದಿತ್ತು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಅಂಕಿತ್ ಶವ ಚಾಂದಬಾಗ್ ಮೋರಿಯಲ್ಲಿ ಬಿದ್ದಿದೆ ಎಂಬ ಮಾಹಿತಿ ಸಿಕ್ಕಿತ್ತು. ಆತನನ್ನು ಕೊಲೆ ಮಾಡಿರಬಹುದು ಎಂದು ನಾವೆಂದೂ ಯೋಚಿಸಿಯೇ ಇರಲಿಲ್ಲ’ ಎಂದು ತಂದೆ ರವೀಂದ್ರ ಶರ್ಮಾ ತಿಳಿಸಿದರು.

ರವೀಂದ್ರ ಶರ್ಮಾ ಅವರ ದೂರಿನ ಮೇರೆಗೆ ದಯಾಳಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಅಂಕಿತ್ ಕೊಲೆ ಆರೋಪದಲ್ಲಿ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಹುಸೇನ್ ಅವರನ್ನು ಆಪ್‌ನಿಂದ ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News