ಅಲ್ಪಸಂಖ್ಯಾತ ಸಮುದಾಯವನ್ನು 2ನೆ ದರ್ಜೆಯ ನಾಗರಿಕರನ್ನಾಗಿಸುವ ಪ್ರಕ್ರಿಯೆ ಸಹಿಸಲಾಗದು: ಶಶಿಧರ ಭಟ್
ಮಂಗಳೂರು, ಫೆ. 28: ದೇಶಾದ್ಯಂತ ಮುಸ್ಲಿಮರಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ. ಅವರಲ್ಲಿ ವಿಶ್ವಾಸ ತುಂಬಿಸಬೇಕಾಗಿದ್ದ ಕೇಂದ್ರ ಸರಕಾರವು ಅಲ್ಪಸಂಖ್ಯಾತರನ್ನು ಎರಡನೆ ದರ್ಜೆಯ ನಾಗರಿಕರನ್ನಾಗಿಸುವ ಪ್ರಕ್ರಿಯೆಗೆ ಮುಂದಾಗಿದೆ. ಅದಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಸಾಕ್ಷಿಯಾಗಿದೆ. ಕೇಂದ್ರ ಸರಕಾರದ ಈ ನಡೆಯನ್ನು ಸಹಿಸಲಾಗದು ಎಂದು ಪತ್ರಕರ್ತ ಶಶಿಧರ ಭಟ್ ಹೇಳಿದ್ದಾರೆ.
ದೆಹಲಿಯ ಹಿಂಸಾಚಾರವನ್ನು ಖಂಡಿಸಿ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ಶುಕ್ರವಾರ ಕುದ್ರೋಳಿ ಜಾಮಿಯಾ ಮಸೀದಿಯ ಮುಂದೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೆಹಲಿಯ ಹಿಂಸಾಚಾರವು ಫ್ಯಾಸಿಸ್ಟ್ ಸರಕಾರದ ಅನತಿಯಂತೆ ನಡೆಯುತ್ತಿದೆ. 1947ರಲ್ಲಿ ದೇಶ ವಿಭಜನೆಯಾದಾಗ ಹಿಂದೂ ಮುಸ್ಲಿಂ ಗಲಭೆಯಾಗಿತ್ತು. ಆವಾಗ ಮಹಾತ್ಮಾ ಗಾಂಧಿ ಮತ್ತು ಜವಾಹರ ಲಾಲ್ ನೆಹರೂ ಬೀದಿಗಿಳಿದು ಹಿಂದೂ ಮುಸ್ಲಿಂ ಐಕ್ಯತೆಗೆ ಶ್ರಮಿಸಿದ್ದರು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಷ್ಟೆಲ್ಲಾ ಹಿಂಸಾಚಾರವಾದರೂ ಮೌನ ತಾಳಿದ್ದಾರೆ. ಆಡಳಿತಗಾರರ ಈ ನಿಲುವು ಖಂಡನೀಯ. ಗೋಡ್ಸೆವಾದವನ್ನು ಮುಂದಿಟ್ಟು ಗಾಂಧಿವಾದವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಸರಕಾರದಿಂದ ದೇಶದ ಜನತೆ ಹಿಂಸಾಚಾರವಲ್ಲದೆ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಶಶಿಧರ ಭಟ್ ಹೇಳಿದರು.
ಕಾರ್ಪೊರೇಟರ್ ಸಂಶುದ್ದೀನ್ ಕುದ್ರೋಳಿ, ಮಾಜಿ ಕಾರ್ಪೊರೇಟರ್‌ಗಳಾದ ಅಬೂಬಕರ್ ಕುದ್ರೋಳಿ, ಅಝೀಝ್ ಕುದ್ರೋಳಿ, ಮುಸ್ಲಿಂ ಐಕ್ಯತಾ ವೇದಿಕೆಯ ಪ್ರಮುಖರಾದ ಅಶ್ರಫ್ ಕಿನಾರಾ, ಯಾಸೀನ್, ಮಕ್ಬೂಲ್ ಮತ್ತಿತರರು ಪಾಲ್ಗೊಂಡಿದ್ದರು.