ಮಾಣಿ: ಸಿಎಎ, ಎನ್‍ಆರ್ ಸಿ ವಿರೋಧಿಸಿ ಪ್ರತಿಭಟನಾ ಸಮಾವೇಶ

Update: 2020-02-28 14:18 GMT

ಬಂಟ್ವಾಳ, ಫೆ. 28: ದೆಹಲಿ ಹತ್ಯಾಕಾಂಡ ಒಂದು ಆಕಸ್ಮಿಕ ಅಥವಾ ಒಂದು ಕೆಟ್ಟ ಗಳಿಗೆಯಲ್ಲಿ ನಡೆದ ಸಣ್ಣ ಘಟನೆ ಅಲ್ಲ. ಅದೊಂದು ಪೂರ್ವ ಯೋಜಿತ ಹಾಗೂ ವ್ಯವಸ್ಥಿತವಾದ ಘಟನೆಯಾಗಿದೆ. ಇದು ದೇಶದಲ್ಲಿ ಗಾಂಧಿವಾದವನ್ನು ನಾಶ ಮಾಡಿ ಗೋಡ್ಸೆ ವಾದವನ್ನು ಸ್ಥಾಪನೆ ಮಾಡುವ ಆರೆಸ್ಸೆಸ್ ಮತ್ತು ಬಿಜೆಪಿಯ ಷಡ್ಯಂತರದ ಭಾಗವಾಗಿದೆ. ಇಂತಹ ಘಟನೆಗಳು ದೇಶದ ಬೇರೆ ಬೇರೆ ಭಾಗದಲ್ಲಿ ಇನ್ನೂ ಮುಂದುವರಿಯುವ ಅಪಾಯ ಇದೆ ಎಂದು ಹಿರಿಯ ಪತ್ರಕರ್ತ ಶಶಿಧರ್ ಭಟ್ ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನ ಸಂರಕ್ಷಣಾ ಸಮಿತಿ ಮಾಣಿ ಇದರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್)ಯನ್ನು ವಿರೋಧಿಸಿ ಮಾಣಿಯ ಗಾಂಧಿ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಹಿನ್ ಭಾಗ್‍ನಲ್ಲಿ ನಡೆದಿರುವುದು ಐತಿಹಾಸಿ ಪ್ರತಿಭಟನೆಯಾಗಿದೆ. ಎರಡು ತಿಂಗಳಿಗೂ ಅಧಿಕ ದಿನಗಳ ಕಾಲ ನಡೆದ ಶಾಹಿನ್ ಭಾಗ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಭಾಗವಹಿಸಿದ್ದರು. ಅಲ್ಲಿ ಹಿಂದೂ ಮುಸ್ಲಿಮರ ನಡುವೆ ದ್ವೇಷ ಇರಲಿಲ್ಲ. ಹಿಂಸೆ ಇರಲಿಲ್ಲ. ಮೋಸ ಇರಲಿಲ್ಲ. ಷಡ್ಯಂತರ ಇರಲಿಲ್ಲ. ಅಲ್ಲಿ ಮನುಷ್ಯತ್ವ, ಪ್ರೀತಿ, ಸೌಹಾರ್ದ, ಭ್ರಾತೃತ್ವ ಮಾತ್ರ ಇತ್ತು. ಶಾಹಿನ್ ಭಾಗ್ ಪ್ರತಿಭಟನೆಯ ಧ್ವನಿ ವಿಶ್ವದ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸಿದೆ. ಇದರಿಂದ ಪ್ರಧಾನಿ ಮೋದಿಯ ಸಿದ್ಧಾಂತ ಜಗಜ್ಜಾಹಿರಾಗಿದೆ. ಹಾಗಾಗಿ ಆರೆಸ್ಸೆಸ್ ಹಾಗೂ ಬಿಜೆಪಿ ಗೂಂಡಾಗಳನ್ನು ಬಿಟ್ಟು ದೆಹಲಿಯಲ್ಲಿ ಹತ್ಯಾಕಾಂಡ ನಡೆಸಿವೆ. ಮೋದಿ, ಅಮಿತ್ ಶಾ ಅವರ ಗುಜರಾತ್ ಮಾದರಿಯ ರಾಜಕಾರಣ ಹಿಂಸೆಯಲ್ಲೇ ಆರಂಭಗೊಂಡಿದ್ದು ಇಂದು ಅದೇ ಗುಜರಾತ್ ಮಾದರಿ ರಾಜಕಾರಣ ದೆಹಲಿಗೆ ತಲುಪಿದೆ ಎಂದು ಅವರು ಹೇಳಿದರು.

ಇದು ಒಂದು ಸಮುದಾಯಕ್ಕೆ ಸೇರಿದ ಹೋರಾಟ ಅಲ್ಲ. ಈ ದೇಶದ ಪೌರರ ಪೌರತ್ವವನ್ನು ಪ್ರಶ್ನಿಸುವವರ ವಿರುದ್ಧ ನಡೆಯು ತ್ತಿರುವ ಹೋರಾಟವಾಗಿದೆ. ಉತ್ತರ ಕರ್ನಾಟಕದ ಜನರು ಮಾತನಾಡುವ ಕನ್ನಡಕ್ಕೂ ಕರಾವಳಿಯ ಜನರು ಮಾತನಾಡುವ ಕನ್ನಡಕ್ಕೂ ವ್ಯತ್ಯಾಸ ಇದೆ. ಬಯಲುಸೀಮೆಯ ಜನರು ಮಾತನಾಡುವ ಕನ್ನಡಕ್ಕೂ ಮಲೆನಾಡಿನ ಜನರು ಮಾತನಾಡುವ ಕನ್ನಡಕ್ಕೂ ವ್ಯತ್ಯಾಸ ಇದೆ. ಆದರೆ ನಾವೆಲ್ಲರೂ ಕರ್ನಾಟಕದವರಾಗಿದ್ದೇವೆ. ಇದುವೇ ವಿವಿಧತೆಯಲ್ಲಿ ಏಕತೆಯಾಗಿದೆ. ಧರ್ಮಗಳ ನಡುವೆ ವೈರತ್ವವನ್ನು ಉಂಟು ಮಾಡಿ ದೇಶದಲ್ಲಿ ಮನುವಾದವನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ. ಅದರ ವಿರುದ್ಧದ ಹೋರಾಟಕ್ಕೆ ದೇಶ ಎಂದೂ ಕಂಡರಿಯದ ರೀತಿಯಲ್ಲಿ ಮಹಿಳೆಯವರು ಹಾಗೂ ಯುವ ಜನರು ಮುಂದಾಳತ್ವ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದನ್ನು ಸಹಿಸಲು ಸಾಧ್ಯವಾಗದ ಬಿಜೆಪಿ ಮತ್ತು ಆರೆಸ್ಸೆಸ್ ಹಿಂಸೆಯನ್ನು ಪ್ರಚೋಧಿಸುತ್ತಿವೆ. 

- ನೇಮಿಚಂದ್ರ, ಪ್ರಗತಿಪರ ಹೋರಾಟಗಾರ್ತಿ 

ಕೇಂದ್ರ ಮತ್ತು ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ಶಾಸಕರಿಗೆ ಭತ್ಯೆ ಸಿಗುತ್ತಿಲ್ಲ. ಮಾಜಿ ಶಾಸಕರಿಗೆ ಪಿಂಚಣಿ ಸಿಗದೆ ಮೂರು ತಿಂಗಳಾಗಿವೆ. ಶಾಸಕರ ಸಹಾಯಕರಿಗೆ ಸಂಬಳ ಆಗಿಲ್ಲ. ನೋಟ್ ಬ್ಯಾನ್ ಮಾಡಿ ಹೊಸದಾಗಿ ತಂದ 2,000 ರೂ. ಮುಖ ಬೆಲೆಯ ನೋಟಿನ ಗುಣಮಟ್ಟ ಸರಿಯಿಲ್ಲ ಎಂದು ಸರಕಾರ ಬದಲಾಯಿಸಲು ಹೊರಟಿದೆ. ಇವೆಲ್ಲವನ್ನೂ ಮುಚ್ಚಿಹಾಕಲು ಕರಾಳ ಕಾನೂನುಗಳನ್ನು ಜಾರಿಗೆ ತಂದು ಸರಕಾರ ಜನರ ದಾರಿ ತಪ್ಪಿಸುತ್ತಿವೆ. 
- ಬಿ.ರಮಾನಾಥ ರೈ, ಮಾಜಿ ಸಚಿವರು 

ಸಾಮಾಜಿಕ ಹೋರಾಟಗಾರ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಲಿತ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್, ವಕೀಲ ಅಮೀನ್ ಮೊಹ್ಸಿನ್ ಮಡಿಕೇರಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಜೆಡಿಎಸ್ ರಾಜ್ಯ ಮುಖಂಡ ಎಂ.ಬಿ.ಸದಾಶಿವ ಸುಳ್ಯ, ಮಾಜಿ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿದರು.

ಮಾಣಿ ದಾರುಲ್ ಇರ್ಶಾದ್ ಸ್ಥಾಪಕಾಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸದಸ್ಯ ಆದಂ ಕುಂಞಿ ಕೆದಿಲ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ನೇರಳಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ನಿರಂಜನ್ ರೈ, ಕಲ್ಲಡ್ಕ ಜುಮಾ ಮಸೀದಿ ಖತೀಬ್ ಶೇಖ್ ಮುಹಮ್ಮದ್ ಇರ್ಫಾನಿ, ಸಂವಿಧಾನ ಸಂರಕ್ಷಣಾ ಸಮಿತಿ ಮಾಣಿ ಸಂಚಾಲಕ ಸುದೀಪ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಆಳ್ವ, ತಾಪಂ ಮಾಜಿ ಸದಸ್ಯ ಕುಶಲ ಎಂ. ಪೆರಾಜೆ, ಕೊಡಾಜೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹೀಂ ರಾಜ್‍ಕಮಲ್, ಕೋಶಾಧಿಕಾರಿ ಮುಹಮ್ಮದ್ ರಫೀಕ್ ಸುಲ್ತಾನ್, ಮಜೀದ್ ದಾರಿಮಿ ಏನಾಜೆ, ಸೂರಿಕುಮೇರು ಜುಮಾ ಮಸೀದಿ ಅಧ್ಯಕ್ಷ ಮೂಸಾ ಕರೀಂ ಮಾಣಿ ಉಪಸ್ಥಿತರಿದ್ದರು. 

ಸಂವಿಧಾನ ಸಂರಕ್ಷಣಾ ಸಮಿತಿ ಮಾಣಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಖಂದಕ್ ಮಿತ್ತೂರು ಸ್ವಾಗತಿಸಿದರು. ರಶೀದ್ ನೀರಪಾದೆ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಹೋರಾಟಗಾರ್ತಿ ನೇಮಿಚಂದ್ರ, ರಾಜೇಶ್ವರಿ ಬೆಂಗಳೂರು ಕ್ರಾಂತಿ ಗೀತೆ ಹಾಡಿದರು. ಅಶ್ರಫ್ ಅರಬಿ ಕಲ್ಲಡ್ಕ, ಯಹಿಯ್ಯಾ ಬರಿಮಾರು, ಸಿದ್ದೀಕ್ ಬೀಟಿಗೆ, ಮಜೀದ್ ಸೂರಿಕುಮೇರು ಅಝಾದಿ ಘೋಷಣೆ ಕೂಗಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News