ದಿಲ್ಲಿ: ಮುಸ್ಲಿಮರ ವಿರುದ್ಧ ಸಭೆ ನಡೆಸಲು ವಿಡಿಯೋ ಮೂಲಕ ಕರೆ ನೀಡಿದ ವ್ಯಕ್ತಿಯ ಬಂಧನ

Update: 2020-02-28 14:52 GMT

ಹೊಸದಿಲ್ಲಿ, ಫೆ. 28: ಮುಸ್ಲಿಮರ ವಿರುದ್ಧ ಜನರನ್ನು ಸಂಘಟಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ವೀಡಿಯೊ ಮಾಡಿ ಸಾರ್ವಜನಿಕ ಸಭೆ ಕರೆದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರವಿ ಭದನಾ ಎಂದು ಗುರುತಿಸಲಾದ ಈ ವ್ಯಕ್ತಿಯನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದರು.

ಈಗ ಆತ ಕರೆದೆ ಸಭೆಯನ್ನು ರದ್ದುಗೊಳಿಸಲಾಗಿದೆ. ವೀಡಿಯೊದಲ್ಲಿ ಭದನ್, ‘‘ಮಾರ್ಚ್ 1ರಂದು 10 ಗಂಟೆಗೆ ಜಿಡಿ ಗೋಯೆಂಕಾ ಶಾಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಬೇಕು ಎಂದು ನಾನು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ನೆರೆಯವರು ಕೂಡ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈ ಸಂದೇಶವನ್ನು ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿ. ಇದು ನಾವು ದೊಡ್ಡ ಸಂಖ್ಯೆಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಸಮಯ. ಇಲ್ಲದೇ ಇದ್ದರೆ, ನಾವು (ಹಿಂದೂಗಳು) ಅವರ (ಮುಸ್ಲಿಮರು) ಗುಲಾಮರಾಗಬೇಕಾಗುತ್ತದೆ. ದಿಲ್ಲಿಯ ಪ್ರತಿ ಮೂಲೆ ಕೂಡ ಸುಟ್ಟು ಕರಕಲಾಗಿರುವುದನ್ನು ನಾವು ನೋಡಿದ್ದೇವೆ. ನಮ್ಮ ಯೋಧರನ್ನು ಕೊಲ್ಲಲಾಗಿದೆ. ನಮ್ಮ ಪೊಲೀಸರಿಗೆ ಹಾಡು ಹಗಲೇ ಗುಂಡಿಕ್ಕಲಾಗಿದೆ’’ ಎಂದು ಆತ ಹೇಳಿದ್ದಾನೆ.

ಮುಂದುವರಿದು ಆತ, ‘‘ಶಾಹೀನ್‌ಬಾಗ್ ಪರಿಸ್ಥಿತಿ ಕಳೆದ ಒಂದೂವರೆ ತಿಂಗಳಿಂದ ಹದಗೆಟ್ಟಿದೆ. ಸಂಪೂರ್ಣ ಪ್ರದೇಶ ಈ ಜನರಿಂದ ತುಂಬಿದೆ. ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜನರಿಗೆ ತಮ್ಮ ಕೆಲಸಕ್ಕೆ ಉತ್ತರಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆ್ಯಂಬುಲೆನ್ಸ್ ಸಂಚರಿಸಲು ಕೂಡ ಅವರು ಅವಕಾಶ ನೀಡುತ್ತಿಲ್ಲ. ಇದರಿಂದ ಸಾವುಗಳು ಸಂಭವಿಸಿವೆ. ಪ್ರತಿಭಟನಾಕಾರರನ್ನು ಶಿಕ್ಷಿಸಲು ಹಾಗೂ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಎಲ್ಲ ಹಿಂದೂಗಳು ಸಂಘಟಿತರಾಗಬೇಕು. ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಮದನಪುರದಲ್ಲಿರುವ ಜಿಡಿ ಗೊಯೆಂಕಾ ಶಾಲೆಯಲ್ಲಿ ಎಲ್ಲರೂ ಸೇರಬೇಕು’’ ಎಂದಿದ್ದಾನೆ.

ಇಲ್ಲಿರುವ ಪ್ರತಿಯೊಬ್ಬರೂ ಪ್ರತಿ ಮನೆಗೆ ತೆರಳಿ ಈ ಹೋರಾಟದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಬೇಕು. ಪ್ರಯಾಣಕ್ಕೆ ಟೆಂಪೊ ಸೌಲಭ್ಯ ಮಾಡಲಾಗುವುದು ಎಂದು ರವಿ ಭದನ್ ವೀಡಿಯೊದಲ್ಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News