ಬಿಜೆಪಿ ಮಾಜಿ ಶಾಸಕ ನರೇಂದ್ರ ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Update: 2020-02-28 14:39 GMT

ಥಾಣೆ, ಫೆ.28: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್‌ನಲ್ಲಿ ಮಹಿಳಾ ಕಾರ್ಪೊರೇಟರ್ ಮೇಲೆ ಅತ್ಯಾಚಾರ ನಡೆಸಿದ ಮತ್ತು ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಶುಕ್ರವಾರ ಮೀರಾ-ಭಾಯಂದರ್‌ನ ಮಾಜಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಮತ್ತು ಸಹಚರ ಸಂಜಯ ಥರ್ಥರೆ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮೆಹ್ತಾ ಮೂರು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ.

ಮೆಹ್ತಾ ಅವರಿಂದ ತಾನು ಅನುಭವಿಸಿರುವ ಕಿರುಕುಳ ಮತ್ತು ಶೋಷಣೆಯ ಬಗ್ಗೆ ಮಹಿಳಾ ಕಾರ್ಪೊರೇಟರ್ ಮಾತನಾಡಿದ್ದ ವೀಡಿಯೊ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

1999ರಿಂದಲೂ ಮೆಹ್ತಾ ತನ್ನನ್ನು ಶೋಷಿಸುತ್ತಿದ್ದಾರೆ ಮತ್ತು ಅವರಿಂದ ತನ್ನ ಕುಟುಂಬಕ್ಕೆ ಬೆದರಿಕೆ ಎದುರಾಗಿದೆ ಎಂದು ಕಾರ್ಪೊರೇಟರ್ ಆರೋಪಿಸಿದ್ದಾರೆ ಎಂದರು.

ತನ್ಮಧ್ಯೆ ಮೆಹ್ತಾ ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿರುವ ಥಾಣೆಯ ಶಿವಸೇನೆ ಶಾಸಕ ಪ್ರತಾಪ ಸರನಾಯಕ್ ಅವರು,ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯವನ್ನು ಎತ್ತುವ ಬಿಜೆಪಿಯು ತನ್ನ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News