×
Ad

'ಬಜೆಟ್‌ನಲ್ಲಿ ಮದ್ಯ ಮಾರಾಟಗಾರರ ಬೇಡಿಕೆ ಈಡೇರಿಸದಿದ್ದರೆ ಹೋರಾಟ'

Update: 2020-02-28 20:17 IST

ಉಡುಪಿ, ಫೆ.28: ರಾಜ್ಯದ ಮದ್ಯ ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಈಡೇರಿಸದಿದ್ದರೆ ಹಾಗೂ ಸಮಸ್ಯೆಗಳನ್ನು ಮುಖ್ಯ ಮಂತ್ರಿ ಸಭೆ ಕರೆದು ಬಗೆಹರಿಸದಿದ್ದಲ್ಲಿ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫೆಡರೇಶನ್ ಅಧ್ಯಕ್ಷ ಎಸ್.ಗುರುಸ್ವಾಮಿ ಮೈಸೂರು, ಮೊದಲನೆ ಹಂತವಾಗಿ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನಾ ಜಾಥ ಮತ್ತು ಸಭೆ, ಎರಡನೆ ಹಂತ ವಾಗಿ ಎಪ್ರಿಲ್ ತಿಂಗಳಲ್ಲಿ ಪರ್ಮಿಟ್ ಚಳವಳಿ ಮತ್ತು ಮೇ ತಿಂಗಳಲ್ಲಿ ರಾಜ್ಯಾ ದ್ಯಂತ ಮದ್ಯ ಮಾರಾಟ ಬಂದ್ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಚುನಾವಣೆ ಸಂದರ್ಭ ನೀತಿ ಸಂಹಿತೆ ಜಾರಿಯಲ್ಲಿರುವಷ್ಟು ದಿನ ಮದ್ಯ ಬಂದ್ ಮಾಡುವ ಪಂಚಾಯತ್‌ರಾಜ್ ಕಾಯಿದೆ ತಿದ್ದುಪಡಿಯನ್ನು ಮುಂದಿನ ಅಧಿವೇಶನದಲ್ಲಿ ಹಿಂತೆಗೆದುಕೊಂಡು ಗ್ರಾಪಂ ಚುನಾವಣೆ ಸಂದರ್ಭ ಇತರ ಚುನಾವಣಾ ಸಮಯದಲ್ಲಿ ಜಾರಿಯಲ್ಲಿರುವ ಪ್ರಜಾಪ್ರತಿನಿಧಿ ಕಾಯಿದೆ(ಮತದಾನ ಮುಗಿಯುವ 48ಗಂಟೆಗಳ ಮೊದಲು ಮದ್ಯ ಬಂದ್) ಪ್ರಕಾರ ಚುನಾವಣೆ ನಿರ್ವಹಿಸಬೇಕು ಎಂದರು.

2007ರಿಂದ ಮದ್ಯ ಮಾರಾಟದ ಮೇಲಿನ ಲಾಭಾಂಶವನ್ನು ಶೇ.10ರಷ್ಟು ನೀಡಲಾಗುತ್ತಿದೆ. ಆದರೆ ಈ ಲಾಭಾಂಶದಲ್ಲಿ ಇಂದಿನ ಖರ್ಚುವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಲಾಭಾಂಶವನ್ನು ಹೆಚ್ಚಳ ಮಾಡಿ ಶೇ.20ರಷ್ಟು ನೀಡಬೇಕು ಎಂದು ಅವರು ಆಗ್ರಹಿಸಿದರು.

ರೂಮ್‌ಗಳನ್ನು ಕಡಿಮೆ ಮಾಡಿರುವ 2018ರ ತಿದ್ದುಪಡಿಯನ್ನು ಹಿಂತೆಗೆದು ಕೊಂಡು, ಗ್ರಾಮಾಂತರದಲ್ಲಿ 30 ಹಾಗೂ ನಗರದಲ್ಲಿ 50ರೂಮ್‌ಗಳು ರಚಿಸಿದ್ದಲ್ಲಿ ಮಾತ್ರ ಪ್ರವಾಸೋದ್ಯಮ ಕಾನೂನಿನ ಅಡಿಯಲ್ಲಿ ಮದ್ಯ ಮಾರಾಟದ ಲೈಸನ್ಸ್ ನೀಡಬೇಕು. 2018ರಿಂದ ಮಂಜೂರಾಗಿರುವ ಹೊಸ ಲೈಸನ್ಸ್‌ಗಳನ್ನು ನೀಡುವ ವೇಳೆ ಕಾನೂನು ಪಾಲಿಸದೆ ಇರುವುದರಿಂದ ಈ ಸನ್ನದು ಗಳನ್ನು ಮರುಪರಿಶೀಲನೆಗೆ ಒಳಪಡಿಸಿಬೇಕು. ಇದರಲ್ಲಿ ನ್ಯೂನತೆ ಇದ್ದರೆ ಆ ಲೈಸನ್ಸ್ ಮತ್ತು ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಎಲ್ಲ ವಲಯ ಮತ್ತು ವರ್ಗದ ಲೈಸನ್ಸ್‌ದಾರರಿಗೆ ಈಗ ಇರುವ ಶುಲ್ಕಕ್ಕಿಂತ ಏಕರೂಪದ ಲೈಸನ್ಸ್ ಶುಲ್ಕ(2ಲಕ್ಷ ರೂ.)ವನ್ನು ವಿಧಿಸಿ ಮದ್ಯ ಮತ್ತು ಬೀಯರ್ ಮಾರಾಟದ ವೌಲ್ಯದ ಮೇಲೆ ಶುಲ್ಕ ವಿಧಿಸಬೇಕು. ಮಿಲಿಟರಿ ಕ್ಯಾಂಟಿನ್ ಸ್ಟೋರ್‌ಗಳ ಹೆಸರಿನಲ್ಲಿ ಸರಬರಾಜು ಆಗುವ ನಕಲಿ ಮದ್ಯ ಮತ್ತು ಹೊರ ರಾಜ್ಯದ ಮದ್ಯಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಲೈಸನ್ಸ್‌ಗಳನ್ನು ಬಂದ್ ಮಾಡು ತ್ತಿರುವ ಕುರಿತು ಕ್ರಮಕೈಗೊಳ್ಳಬೇಕು. ಎಂಎಸ್‌ಐಎಲ್ ಅಂಗಡಿಗಳನ್ನು ರದ್ದು ಗೊಳಿಸಬೆೀಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆ, ಕೋಶಾಧಿಕಾರಿ ಟಿ.ಎಂ.ಮೆಹರ್‌ವಾಡೆ ಹುಬ್ಬಳ್ಳಿ, ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ ಬೆಂಗಳೂರು, ಜಿ.ರಾಮುಲು ಬಳ್ಳಾರಿ, ರಮೇಶ್ ಶಾಲಗಾರ ಬೆಳಗಾವಿ, ಯೋಗೀಶ್ ಬೆಂಗಳೂರು, ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News