ಕಾಂಗ್ರೆಸ್ - ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ಕಾಮತ್
Update: 2020-02-28 20:21 IST
ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಉಪ ಮೇಯರ್ ಆಯ್ಕೆಯ ಸಂದರ್ಭ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಝೀನತ್ ಶಂಶುದ್ದೀನ್ ಪರವಾಗಿ ಎಸ್.ಡಿ.ಪಿ.ಐ ಸದಸ್ಯರು ಮತ ಚಲಾಯಿಸಿದ್ದಾರೆ. ಚುನಾವಣೆ ಬಂದಾಗ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುವ ಕಾಂಗ್ರೆಸ್ ಮುಖಂಡರು ಎಸ್.ಡಿ.ಪಿ.ಐ ಜೊತೆಗಿನ ಒಳ ಒಪ್ಪಂದದ ಕುರಿತು ಮೌನ ಮುರಿಯಬೇಕು, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಶಾಸಕ ಕಾಮತ್ ಹೇಳಿದರು.
ರಾಜಕೀಯ ಲಾಭಕ್ಕಾಗಿ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಬದಲು ನೇರವಾಗಿ ತಮ್ಮ ರಾಜಕೀಯ ಒಳ ಒಪ್ಪಂದದ ಕುರಿತು ಸಾರ್ವಜನಿಕವಾಗಿ ಒಪ್ಪಿಕೊಂಡು ಚುನಾವಣಾ ಕಣಕ್ಕಿಳಿಯಬೇಕು. ಅದಲ್ಲದೆ ಜನರ ಮುಂದೆ ಬೇರೆ ಬೇರೆಯಾಗಿ ಚುನಾವಣೆ ಎದುರಿಸಿ ಅಧಿಕಾರದ ಅಭಿಲಾಶೆಯಿಂದ ಒಂದಾಗುವ ನಾಟಕೀಯ ಬೆಳವಣಿಗೆಗಳು ಕಾಂಗ್ರೆಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.