ಕೊರೋನವೈರಸ್ ಹರಡುವಿಕೆಯ ಮೇಲೆ ಅಮೆರಿಕ ಗುಪ್ತಚರ ಸಂಸ್ಥೆಗಳಿಂದ ನಿಗಾ

Update: 2020-02-28 15:19 GMT

 ವಾಶಿಂಗ್ಟನ್, ಫೆ. 28: ಕೊರೋನವೈರಸ್ ಸೋಂಕಿನ ಜಾಗತಿಕ ಹರಡುವಿಕೆಯನ್ನು ಹಾಗೂ ರೋಗಕ್ಕೆ ಪ್ರತಿಕ್ರಿಯಿಸುವ ಸರಕಾರಗಳ ಸಾಮರ್ಥ್ಯವನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ ಹಾಗೂ ಒಂದು ವೇಳೆ ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡಿದರೆ ಭಾರತ ಹೇಗೆ ನಿಭಾಯಿಸುತ್ತದೆ ಎಂಬ ಬಗ್ಗೆ ಅವುಗಳು ಕಳವಳ ವ್ಯಕ್ತಪಡಿಸಿವೆ.

ಭಾರತದಲ್ಲಿ ಕೆಲವೇ ಪ್ರಕರಣಗಳು ವರದಿಯಾಗಿವೆಯಾದರೂ, ದೇಶದ ದಟ್ಟ ಜನಸಂಖ್ಯೆಯ ಹಿನ್ನೆಲೆಯಲ್ಲಿ ವೇಗವಾಗಿ ಹರಡುವ ಕೊರೋನವೈರಸ್‌ನ ಸಾಮರ್ಥ್ಯ ಮತ್ತು ದೇಶದಲ್ಲಿ ಲಭ್ಯವಿರುವ ಸೀಮಿತ ನಿವಾರಣಾ ಕ್ರಮಗಳು ಕಳವಳಕ್ಕೆ ಕಾರಣವಾಗಿವೆ ಎಂದು ಮೂಲವೊಂದು ತಿಳಿಸಿದೆ.

ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಾನ್ ಮೇಲಯೂ ಗಮನ ಕೇಂದ್ರೀಕರಿಸಿವೆ. ಆ ದೇಶದಲ್ಲಿ ಉಪ ಆರೋಗ್ಯ ಸಚಿವ ಮತ್ತು ಉಪಾಧ್ಯಕ್ಷೆಯೇ ಕೊರೋನವೈರಸ್ ಸೋಂಕಿಗೆ ಗುರಿಯಾಗಿದ್ದಾರೆ.

ಕೊರೋನವೈರಸ್ ಹರಡುವಿಕೆ ಕುರಿತ ವಿವರಗಳನ್ನು ಇರಾನ್ ಮುಚ್ಚಿಟ್ಟಿರಬಹುದು ಎಂಬ ತೀವ್ರ ಆತಂಕವನ್ನು ಅಮೆರಿಕ ಹೊಂದಿದೆ ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಂಗಳವಾರ ಹೇಳಿದ್ದಾರೆ.

ಮಾರಕ ಕಾಯಿಲೆಯ ಸೋಂಕು ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡರೆ, ಅದನ್ನು ಎದುರಿಸುವ ಇರಾನ್‌ನ ಸರಕಾರದ ಸಾಮರ್ಥ್ಯ ಸೀಮಿತವಾಗಿದೆ ಎಂದು ಅಮೆರಿಕ ಸರಕಾರದ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News