ಮಂಗಳೂರು ಖಾಝಿಗೆ ಪೊಲೀಸ್ ಭದ್ರತೆ

Update: 2020-02-28 15:21 GMT

ಮಂಗಳೂರು, ಫೆ. 28: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಕಾರಣಕ್ಕೆ ದುಷ್ಕರ್ಮಿಗಳಿಂದ ಕೊಲೆ ಬೆದರಿಕೆಗೆ ಒಳಗಾಗಿರುವ ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರಿಗೆ ಇದೀಗ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಜೀವ ಬೆದರಿಕೆ ಕುರಿತು ಕದ್ರಿ ಪೊಲೀಸರಿಗೆ ದೂರು ನೀಡಿದ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪ್ರತ್ಯೇಕ ದೂರು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ಖಾಝಿಗೆ ಬಿಗು ಪೊಲೀಸ್ ಭದ್ರತೆ ಕಲ್ಪಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಖಾಝಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ ಖಾಝಿ ಕಾಸರಗೋಡು ಪ್ರವಾಸದಲ್ಲಿದ್ದಾರೆ. ಫೆ.29ರಂದು ದ.ಕ. ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಪೊಲೀಸ್ ಎಸ್ಕಾರ್ಟ್‌ನಲ್ಲಿ ಖಾಝಿ ಸಂಚರಿಸಲಿದ್ದಾರೆ. ಅಲ್ಲದೆ ಅವರಿಗೆ ಪ್ರತ್ಯೇಕ ಗನ್‌ಮ್ಯಾನ್ ಕೂಡ ನೀಡಲಾಗಿದೆ.

ಕೇರಳದಲ್ಲೂ ಭದ್ರತೆಗೆ ಮಾಹಿತಿ: ಮಂಗಳೂರು ಖಾಝಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ಸರಕಾರಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ. ಅದರಂತೆ ಈ ಮಾಹಿತಿಯನ್ನು ಕೇರಳ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ. ಖಾಝಿಯ ಕೇರಳ ಪ್ರವಾಸ ವೇಳೆ ಪೊಲೀಸ್ ಎಸ್ಕಾರ್ಟ್ ಹಾಗೂ ಗನ್‌ಮ್ಯಾನ್ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಹರ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News