ಶೀಲ ಶಂಕಿಸಿ ಪತ್ನಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2020-02-28 15:25 GMT

ಮಂಗಳೂರು, ಫೆ.28: ಪತ್ನಿಯ ಶೀಲ ಶಂಕಿಸಿ ತಲವಾರಿನಿಂದ ಕಡಿದು ಕೊಲೆಗೈದ ಪತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಕೆಲ್ಲೂರಿನ ಪ್ರಸ್ತುತ ದೇರೆಬೈಲ್ ಕೊಂಚಾಡಿ ಗ್ರಾಮದ ಬೋರುಗುಡ್ಡೆಯಲ್ಲಿ ವಾಸವಾಗಿದ್ದ ಶರಣಪ್ಪ ಬಾಳಪ್ಪ (48) ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಪತ್ನಿ ಮಂಜುಳಾ (38) ಎಂಬಾಕೆಯನ್ನು 2019 ಎ.20ರಂದು ಕೊಲೆಗೈದಿದ್ದ.

ಘಟನೆಯ ವಿವರ: ಶರಣಪ್ಪ ಬಾಳಪ್ಪ ಕುಟುಂಬವು ಬೋರುಗುಡ್ಡೆಯಲ್ಲಿ ವಾಸವಿದ್ದು, ಪತ್ನಿಯ ಹೆಸರಿನಲ್ಲಿ ಸ್ವಂತ ಮನೆಯಿದೆ. ಇವರಿಗೆ ನಾಲ್ವರು ಹೆಣ್ಣು ಮಕ್ಕಳು. ಮೊದಲ ಪುತ್ರಿಗೆ ವಿವಾಹವಾಗಿದೆ. ಘಟನೆ ಸಂದರ್ಭ ಉಳಿದ ಮೂವರು ಉಡುಪಿಯಲ್ಲಿರುವ ಅಜ್ಜಿ ಮನೆಗೆ ಹೋಗಿದ್ದರು. ಪತಿ-ಪತ್ನಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿಂದೆಯೂ ಗಲಾಟೆಯಾದ ಕಾರಣ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಆರೋಪಿಯು ಪತ್ನಿಯನ್ನು ಬೆಡ್‌ರೂಮ್‌ನಲ್ಲಿ ಕೊಲೆ ಮಾಡಿದ್ದ. ಬೊಬ್ಬೆ ಕೇಳಿ ನೆರೆಕರೆಯವರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾವೂರು ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಕೆ.ಆರ್.ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 18 ಸಾಕ್ಷಿ ವಿಚಾರಣೆ ನಡೆಸಲಾಗಿದೆ.

ತಾಯಿ ಕೊಲೆಯಾದರೆ, ತಂದೆ ಜೈಲು ಪಾಲಾಗಿದ್ದಾನೆ. ಮೂವರು ಮಕ್ಕಳು ಇದೀಗ ಅನಾಥರಾಗಿದ್ದಾರೆ. ಅವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡಲು ನ್ಯಾಯಾಧೀಶರು ಶಿಫಾರಸ್ಸು ಮಾಡಿದ್ದಾರೆ. ಪ್ರಸ್ತುತ ಮೂವರು ಮಕ್ಕಳು ಅಜ್ಜಿ ಮನೆಯಲ್ಲಿದ್ದಾರೆ.

ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ತೀರ್ಪು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕ ಶೇಖರ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News