ಹೈಕೋರ್ಟ್‌ನಿಂದ ಜಾಮೀನು ಪಡೆದ ಯುವಕ ಜೈಲಿನಿಂದ ಬಿಡುಗಡೆ

Update: 2020-02-28 15:37 GMT

ಮಂಗಳೂರು, ಫೆ.28: ಮಂಗಳೂರಿನಲ್ಲಿ ಡಿ.19ರಂದು ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ 23 ಮಂದಿಯ ಪೈಕಿ ಬುಧವಾರ ಹೈಕೋರ್ಟ್‌ನಿಂದ ಜಾಮೀನು ಪಡೆದ 16 ಮಂದಿಯ ಪೈಕಿ ಒಬ್ಬಾತ ಗುರುವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನಿಷೇಧಾಜ್ಞೆ ವೇಳೆ ಸಿಎಎ ವಿರೋಧಿಸಿ ನಡೆದ ಹಠಾತ್ ಪ್ರತಿಭಟನೆಯ ಸಂದರ್ಭ ಅಹಿತಕರ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಕೇಸು ದಾಖಲಿಸಿದ್ದ ಪೊಲೀಸರು 23 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅಲ್ಲದೆ ಆರೋಪಿಗಳ ವಿರುದ್ಧ ಹಲವು ಮೊಕದ್ದಮೆಗಳನ್ನು ದಾಖಲಿಸಿದ್ದರು. ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಬುಧವಾರ 16 ಮಂದಿಗೆ ಜಾಮೀನು ಲಭಿಸಿತ್ತು. ಅದರಂತೆ ಮರ್‌ವಾನ್ ಎಂಬಾತ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಉಳಿದವರಿಗೆ ಜಾಮೀನು ಮಂಜೂರಾದರೂ ಕೂಡ ಇತರ ಕೆಲವು ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಬಿಡುಗಡೆ ಸಾಧ್ಯವಾಗಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ.

ಆದಿತ್ಯ ರಾವ್ ಆಸ್ಪತ್ರೆಯಲ್ಲಿ ಚೇತರಿಕೆ: ಮಲೇರಿಯಾ ಜ್ವರದಿಂದ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿ ಬಂಧನಕ್ಕೆ ಒಳಗಾದ ಶಂಕಿತ ಉಗ್ರ ಆದಿತ್ಯರಾವ್ ಇದೀಗ ಚೇತರಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫೆ.25ರಂದು ಜ್ವರದ ಹಿನ್ನೆಲೆಯಲ್ಲಿ ಮಂಗಳೂರು ಕಾರಾಗೃಹದಿಂದ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈತ ಆಸ್ಪತ್ರೆಗೆ ದಾಖಲಾದ ಕಾರಣ ಫೆ.26ರಂದು ನಡೆಯಬೇಕಾಗಿದ್ದ ಗುರುತು ಪತ್ತೆ ಪರೇಡ್ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News