ಹಾರ್ದಿಕ್ ಪಟೇಲ್‌ಗೆ ನಿರೀಕ್ಷಣಾ ಜಾಮೀನು

Update: 2020-02-28 15:45 GMT
ಫೈಲ್ ಚಿತ್ರ

ಹೊಸದಿಲ್ಲಿ, ಫೆ. 28: 2015ರಲ್ಲಿ ನಡೆದ ಪಾಟೀದಾರ್ ಚಳವಳಿ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ತನ್ನ ವಿರುದ್ಧ ದಾಖಲಿಸಲಾದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹಾರ್ದಿಕ್ ಪಟೇಲ್ ಸಲ್ಲಿಸಿದ ಮನವಿ ಕುರಿತಂತೆ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ವಿನೀತ್ ಅವರನ್ನು ಒಳಗೊಂಡ ಪೀಠ ಗುಜರಾತ್ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. ‘‘2015ರಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಹಾಗೂ ವಿಚಾರಣೆ ಈಗಲೂ ಬಾಕಿ ಇದೆ. ನಾವು ಕಳೆದ 5 ವರ್ಷಗಳಿಂದ ವಿಚಾರಣೆ ನಡೆಸುತ್ತಿದ್ದೇವೆ’’ ಎಂದು ಪೀಠ ಹೇಳಿದೆ.

ಸರಕಾರಿ ಉದ್ಯೋಗಗಳಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದ ಚಳವಳಿಯ ಒಂದು ಭಾಗವಾಗಿ ಹಾರ್ದಿಕ್ ಪಟೇಲ್ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಅಡಿಯಲ್ಲಿ ಅಹ್ಮದಾಬಾದ್‌ನಲ್ಲಿ ಬೃಹತ್ ರ್ಯಾಲಿ ನಡೆಸಿದ್ದರು. ಈ ರ್ಯಾಲಿಗೆ ಅನುಮತಿ ಪಡೆದುಕೊಂಡಿಲ್ಲ ಎಂದು ಪ್ರತಿಪಾದಿಸಿದ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು. ಹಾರ್ದಿಕ್ ಪಟೇಲ್ ಅವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಆದುದರಿಂದ ಜಾಮೀನು ನೀಡಬಾರದು ಎಂದು ಸರಕಾರ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುಜರಾತ್ ಉಚ್ಚ ನ್ಯಾಯಾಲಯ ಫೆಬ್ರವರಿ 17ರಂದು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News