ಜಾನಪದ ಕಲೆಗಳನ್ನು ಬದುಕಿನಲ್ಲಿ ಉಳಿಸಿಕೊಳ್ಳುವುದು ಸವಾಲು: ವೈದೇಹಿ

Update: 2020-02-28 16:15 GMT

ಉಡುಪಿ, ಫೆ.28: ಆಯಾ ಸಮುದಾಯದ ಬದುಕಿನಿಂದ ಚಿಮ್ಮಿ ಬಂದಿರುವ ಜಾನಪದ ಕಲೆಗಳನ್ನು ಮೂಲದಲ್ಲೇ ಉಳಿಸಿಕೊಳ್ಳುವುದು ಇಂದು ಬಹಳ ದೊಡ್ಡ ಸವಾಲಿನ ಕೆಲಸ ಆಗಿದೆ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಗಿರಿಜನ ಉಪಯೋಜನೆಯಡಿಯಲ್ಲಿ ವಿವಿಧ ಜಾನಪದ ಪ್ರಕಾರಗಳ ತರಬೇತಿ ಪಡೆದ ಪರಿಶಿಷ್ಠ ಪಂಗಡದ ಶಿಬಿರಾರ್ಥಿ ಗಳಿಂದ ಜಾನಪದ ಉತ್ಸವ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಇಂದು ಜೀವನ ಕ್ರಮ ಬದಲಾಗುತ್ತಿದೆ. ಮೂಲ ಕಲೆ ಉಳಿಯುವ ಯಾವುದೇ ಆಸೆ ಇಲ್ಲವಾಗಿದೆ. ಮುಂದೆ ಈ ಕಲೆಗಳು ಮ್ಯೂಸಿಯಂಗಳಿಗೆ ಸೀಮಿತವಾಗಲಿದೆ. ಕೇವಲ ಬಾಯಿ ಪಾಠಗಳ ಮೂಲಕ ಆ ಕಲೆಗಳನ್ನು ಕಲಿತುಕೊಳ್ಳಬಹುದು. ಆದರೆ ಅದು ಜೀವನದಿಂದ ಚಿಮ್ಮಿ ಬರಲು ಸಾ್ಯ ಇಲ್ಲವಾಗಿದೆ ಎಂದರು.

ಜಾತಿಗಳನ್ನು ದಾಟಿ ಹೋಗಬೇಕಾದರೆ ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲೆಗಳನ್ನು ಎಲ್ಲರಿಗೂ ಹಂಚಿ ಬಿಡಬೇಕಾಗಿದೆ. ಈ ಮೂಲಕ ನಾವು ಶಿಷ್ಟ ಪರಿಶಿಷ್ಟ ಎಂಬ ಜಾತಿಗಳನ್ನು ದಾಟಿ ಮನುಷ್ಯರಾಗಿ ಕುಣಿಯಬೇಕು. ತಮ್ಮ ಕಲೆಯನ್ನು ಜೋಪಾನವಾಗಿ ಪರಂಪರೆಯಿಂದ ಈವರೆಗೆ ತಂದಿರುವ ಕಲಾವಿದರು ಅದನ್ನು ಉಳಿಸಿಕೊಳ್ಳಬೇಕಾದರೆ ಅವರ ಹಸಿವು ತಣಿಸಬೇಕು. ಅದನ್ನು ರಾಜ್ಯ ಸರಕಾರ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಆಶಯ ನುಡಿಗಳನ್ನಾಡಿದರು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ. ಎಲ್.ಸಾಮಗ ಶಿಬಿರಾರ್ಥಿಗಳಿಗೆ ್ರಮಾಣ ಪತ್ರ ವಿತರಣೆ ಮಾಡಿದರು.

ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಘಟಕದ ಕಾರ್ಯ ದರ್ಶಿ ಐ.ಕೆ.ಜಯಚಂದ್ರ, ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ ಉಪಸ್ಥಿತರಿ ದ್ದರು.

ಈ ಸಂದರ್ಭದಲ್ಲಿ ಶಿಬಿರದ ತರಬೇತುದಾರ ಗಣೇಶ್, ಶಿಬಿರಾರ್ಥಿಗಳಾದ ರಾಮಾಂಜಿ ಉಡುಪಿ, ರಂಜಿತ್ ಬಳ್ಳಾರಿ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಬಳಿಕ ಶಿಬಿರಾರ್ಥಿಗಳಿಂದ ವಿವಿಧ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು.

ಹೆಚ್ಚಿನ ಅನುದಾನ ದೊರೆತರೆ ನೆರವು

ಸರಕಾರದಿಂದ ಹೆಚ್ಚಿನ ಅನುದಾನ ಬಂದರೆ ಜಾನಪದ ಕಲೆಗಳಿಗೆ ಹೆಚ್ಚಿನ ನೆರವು ನೀಡಲಾಗುವುದು. ಈ ಕಲೆ ನಶಿಸಿ ಹೋಗದಂತೆ ತಡೆಯಲು ಅದಕ್ಕೆ ಬೇಕಾದ ವಾದ್ಯ, ಸಿರಿ ಸೇರಿದಂತೆ ಅಗತ್ಯ ಪರಿಕರಗಳ ಖರೀದಿಗೆ ಅನುದಾನ ಒದಗಿಸಲಾಗುವುದು ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.

ಜಾನಪದವೇ ನಮ್ಮ ಸಂಸ್ಕೃತಿಯ ತಾಯಿಬೇರು. ಮೂಲತನವನ್ನು ಕಾಪಾಡಿ ಕೊಂಡು ಜಾನಪದ ಕಲೆಗಳನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸರಕಾರ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ ಕಲಾವಿದರು ಪೈಬರ್ ಕಲಾ ಪರಿಕರಗಳ ಬದಲು ಚರ್ಮದಿಂದ ತಯಾರಿಸಿದ ಪರಿಕರಗಳನ್ನೇ ಬಳಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News