ಅಂಬ್ಯುಲೆನ್ಸ್‌ಗೆ ಹಾನಿ, ಚಾಲಕನಿಗೆ ಹಲ್ಲೆ: ದೂರು

Update: 2020-02-28 16:25 GMT

ಮಣಿಪಾಲ, ಫೆ.28: ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಕರೆದುಕೊಂಡು ಹೋದ ವಿಚಾರದಲ್ಲಿ ಬೇರೆ ಅಂಬ್ಯುಲೆನ್ಸ್‌ನ ತಂಡ ವೊಂದು, ಚಾಲಕನಿಗೆ ಹಲ್ಲೆ ನಡೆಸಿ, ಅಂಬ್ಯುಲೆನ್ಸ್‌ಗೆ ಹಾನಿ ಮಾಡಿರುವ ಘಟನೆ ಫೆ.25ರಂದು ರಾತ್ರಿ ವೇಳೆ ಮಣಿಪಾಲದಲ್ಲಿ ನಡೆದಿದೆ.

ಬೆಳ್ತಂಗಡಿ ತೋಟದಡಿ ಗ್ರಾಮದ ಶ್ರೀಕಾಂತ್ ಎನ್.ಜಿ. ದೇರಳಕಟ್ಟೆ ಖಾಸಗಿ ಮೆಡಿಕಲ್ ಆಸ್ಪತ್ರೆಯೊಂದಿಗೆ ಕರಾರು ಆಗಿರುವ ಇಲ್ಲಿನ ಹೆಲ್ತ್ ಸರ್ವಿಸ್ ಎಂಬ ಸಂಸ್ಥೆಯೊಂದಿಗೆ ಆ್ಯಂಬುಲೆನ್ಸ್ ಒಪ್ಪಂದ ಮಾಡಿಕೊಂಡಿದ್ದರು. ಫೆ.25ರಂದು ಸಂಜೆ ರೋಗಿಯ ಮನೆಯವರು ಕರೆ ಮಾಡಿ ತಿಳಿಸಿದಂತೆ ಇವರು ದೇರಳಕಟ್ಟೆ ಆಸ್ಪತ್ರೆಯಿಂದ ಶಿವಮೊಗ್ಗಕ್ಕೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದರು.

ದಾರಿ ಮಧ್ಯೆ ವ್ಯಕ್ತಿಯೊಬ್ಬರು ರೋಗಿಯ ಮನೆಯವರ ಮೊಬೈಲ್‌ಗೆ ಕರೆ ಮಾಡಿ, ಶ್ರೀಕಾಂತ್ ಅವರಿಗೆ ಮಂಗಳೂರಿನ ಗಣೇಶ ಆ್ಯಂಬುಲೆನ್ಸ್ ನಲ್ಲಿ ತರುವ ರೋಗಿಯನ್ನು ನೀನು ಏಕೆ ಕರೆದುಕೊಂಡು ಬಂದಿರುವುದಾಗಿ ಹೇಳಿ ಅವ್ಯಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದರು. ನಂತರ ಶ್ರೀಕಾಂತ್ ರೋಗಿಯ ಕಡೆಯವರಿಗೆ ಬೇರೆ ಆಂಬುಲೆನ್ಸ್‌ನಲ್ಲಿ ಹೋಗುವಂತೆ ಹೇಳಿ, ಅವರನ್ನು ಮಣಿಪಾಲ ಆ್ಯಂಬುಲೆನ್ಸ್ ಸ್ಟ್ಯಾಂಡ್ ಬಳಿ ಇಳಿಸಿದ್ದರು.

ರಾತ್ರಿ 11:30ರ ಸುಮಾರಿಗೆ ಅಲ್ಲಿಗೆ ಬೇರೆ ಆಂಬುಲೆನ್ಸ್ ನಲ್ಲಿ ಬಂದ 7-8 ಮಂದಿ ಶ್ರೀಕಾಂತ್ ಮೇಲೆ ಹಲ್ಲೆ ಮಾಡಿ, ಅವರ ಆಂಬುಲೆನ್ಸ್ ಮುಂದಿನ ಗಾಜು ಒಡೆದು ಹಾನಿ ಮಾಡಿ ಬೆದರಿಕೆ ಹಾಕಿದ್ದು, ಅವರ ಕೈಯಲ್ಲಿದ್ದ 5 ಸಾವಿರ ರೂ. ನಗದು ಹಣ ತೆಗೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News