ವಿಜ್ಞಾನದ ಬಗ್ಗೆ ಮುಕ್ತ ಮನಸ್ಸು ಹೊಂದಿರಬೇಕು: ಡಾ.ರಾಜನ್

Update: 2020-02-28 16:36 GMT

ಉಡುಪಿ, ಫೆ. 28: ವಿಜ್ಞಾನದ ಕುರಿತಂತೆ ಮುಕ್ತ ಮನಸ್ಸನ್ನು ಹೊಂದಿದ್ದು, ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಬೇಕು. ವಿಜ್ಞಾನದ ವಿವಿಧ ಶಾಖೆಗಳ ನಡುವೆ ಗೋಡೆಗಳನ್ನು ಕಟ್ಟಬೇಡಿ ಎಂದು ಇಸ್ರೋದ ಮಾಜಿ ಬಾಹ್ಯಾಕಾಶ ವಿಜ್ಞಾನಿ ಡಾ. ವೈ. ಎಸ್. ರಾಜನ್ ವಿದ್ಯಾರ್ಥಿ ಸಮುದಾಯಕ್ಕೆ ಕಿವಿಮಾತು ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಮಣಿಪಾಲದ ಹೊಟೇಲ್ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಚೈತ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವ ಹಿಸಿ ಅವರು ಮಾತನಾಡುತಿದ್ದರು.

ವಿಜ್ಞಾನದ ವಿವಿಧ ಶಾಖೆಗಳಲ್ಲಿ ಸಂಶೋಧನೆಗೆ ಇಂದು ವಿಪುಲ ಅವಕಾಶ ಗಳಿವೆ. ಈ ಸಂಶೋಧನೆಗಳಿಂದ ದೈನಂದಿನ ಬದುಕಿನಲ್ಲಿ ಸಹಾಯವಾಗುವುದ ರೊಂದಿಗೆ ಆರ್ಥಿಕವಾಗಿಯೂ ಪ್ರಯೋಜನಕಾರಿಯಾಗಿರಬೇಕು. ನಮ್ಮ ಹೆಮ್ಮೆಯ ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರು ಕಂಡುಹಿಡಿದ ಲೇಸರ್‌ನಿಂದ ಇಂದು ಕೈಗಾರಿಕಾ ವಲಯಕ್ಕೆ 20ಸಾವಿರ ಕೋಟಿ ರೂ. ಆದಾಯ ಬರುತ್ತಿದೆ ಎಂದವರು ಹೇಳಿದರು.

ಇಂದಿನ ವಿದ್ಯಾರ್ಥಿಗಳಿಗೆ ಸಂಶೋಧನೆಗಳೊಂದಿಗೆ ವಿಜ್ಞಾನವನ್ನು ಇನ್ನಷ್ಟು ಬೆಳೆಸಲು ಅವಕಾಶಗಳಿವೆ. ರಾಸಾಯನಿಕ ವಸ್ತುಗಳ ಬಳಕೆಯನ್ನು ಕಡಿಮೆಗೊಳಿಸಿ ಬದಲು ಜೈವಿಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸುವಂತಾಗಬೇಕು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎಂದೂ ಕುತೂಹಲವನ್ನು ಕಳೆದುಕೊಳ್ಳಬಾರದು. ಅದರೊಂದಿಗೆ ಪ್ರಶ್ನಿಸುವುದನ್ನು ಸಹ ಅಭ್ಯಾಸ ಮಾಡಬೇಕು. ಇವು ವಿಜ್ಞಾನದಲ್ಲಿ ಅತೀ ಮುಖ್ಯವಾದ ಅಂಶಗಳು ಎಂದರು.

ಮಕ್ಕಳಲ್ಲಿ ಕುತೂಹಲ ಇಲ್ಲದೇ ಹೋದರೆ, ಮುಂದಿನ ಜನಾಂಗದಲ್ಲಿ ಯಾವುದೇ ಹೊಸ ಸಂಶೋಧನೆಗಳು ನಡೆಯಲು ಸಾಧ್ಯವಿಲ್ಲ. ವಿಜ್ಞಾನದಿಂದಾಗಿ ನಮ್ಮ ಬದುಕು ಸುಲಭವಾಗಿದೆ. ನಾವಿಂದು ಕೃತಕ ಬುದ್ದಿಮತ್ತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಇದರ ಬದಲು ಮನುಷ್ಯನಲ್ಲಿರುವ ಸಹಜ ಬುದ್ಧಿಮತ್ತೆ (ನ್ಯಾಚುರಲ್ ಇಂಟಲಿಜೆನ್ಸ್)ಯನ್ನು ಪರಿಣಾಮಕಾರಿಯಾಗಿ ಬಳಸುವ ಪ್ರಯತ್ನ ನಡೆಯಬೇಕು ಎಂದು ಅಣ್ಣಾಮಲೈ ಹೇಳಿದರು.

ಇಂದಿನ ಮಕ್ಕಳಿಗೆ ಚಿತ್ತವಿಕ್ಷೇಪಗೊಳಿಸುವ ಸಂಗತಿಗಳು ವಿಪುಲವಾಗಿವೆ. ಇವುಗಳಲ್ಲಿ ಮೊಬೈಲ್ ಹಾಗೂ ಟಿವಿ ಪ್ರಮುಖವಾಗಿವೆ. ವಿದ್ಯಾರ್ಥಿಗಳ ಹೆತ್ತವರು ಹಾಗೂ ಅಧ್ಯಾಪಕರು ಅವರನ್ನು ಇದರಿಂದ ವಿಮುಖಗೊಳಿಸಬೇಕು. ನಾವು ಇದ್ದಂತಹ ವಾತಾವರಣದಲ್ಲಿ ಅವರು ಕಲಿಯುವಂತೆ ಮಾಡಬೇಕು. ಆಗ ಬದುಕಿನಲ್ಲಿ ಅವರು ಕುತೂಹಲವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಣ್ಣಾಮಲೈ ಅಭಿಪ್ರಾಯ ಪಟ್ಟರು.

ಇವುಗಳೊಂದಿಗೆ ಬದುಕಿನಲ್ಲಿ ವೈಫಲ್ಯವನ್ನು ಸಹ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಕ್ಷೇತ್ರದಂಥ ಕೆಲವು ಕ್ಷೇತ್ರಗಳನ್ನು ಹೊರತು ಪಡಿಸಿದರೆ ಉಳಿದಂತೆ ನಾವು ವೈಫಲ್ಯದ ಹೆದರಿಕೆಯನ್ನು ಸದಾ ಹೊಂದಿರುತ್ತೇವೆ. ಇದರಿಂದ ಹೊರಬಂದು ವೈಫಲ್ಯವನ್ನು ಸಹಜವಾಗಿ ಸ್ವೀಕರಿಸಿ, ಮುಂದಿನ ಯಶಸ್ಸಿಗೆ ಮೆಟ್ಟಿಲಾಗಿ ಬಳಸಬೇಕು ಎಂದು ಅವರು ವಿದ್ಯಾರ್ಥಿ ಸಮುದಾಯಕ್ಕೆ ಕಿವಿಮಾತು ಹೇಳಿದರು.

ಕುಲಪತಿ ಡಾ.ಎಚ್.ವಿನೋದ್ ಭಟ್ ಅವರೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ನಿರ್ದೇಶಕ ಡಾ.ಕೆ.ಸತ್ಯಮೂರ್ತಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಜ್ಞಾನದ ವಿವಿಧ ಸ್ಪರ್ಧೆಗಳ ವಿಜೇತರಿಗೆ, ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ, ಸ್ಮರಣಿಕೆ, ಸರ್ಟಿಫಿಕೇಟ್‌ಗಳನ್ನು ವಿತರಿಸಿದರು. ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ಸ್ವಾಗತಿಸಿದರೆ, ಭಾರತಿ ಪ್ರಸಾದ್ ವಂದಿಸಿದರು. ಸುಪ್ರೀತಿ ಘೋಷ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News