ಉದ್ಯಾವರ: ಮಿಸ್ ದಿವಾ ಯೂನಿವರ್ಸ್-2020; ಆ್ಯಡ್ಲಿನ್ ಕಸ್ತಲಿನೊಗೆ ಹುಟ್ಟೂರ ಅಭಿನಂದನೆ

Update: 2020-02-28 16:53 GMT

ಉಡುಪಿ, ಫೆ.28: ಇತ್ತೀಚೆಗೆ ಮುಂಬೈಯಲ್ಲಿ ನಡೆದ ಪ್ರಸಕ್ತ ಸಾಲಿನ ‘ಲಿವಾ ಮಿಸ್ ದಿವಾ ಯೂನಿವರ್ಸ್-2020’ರಲ್ಲಿ ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡ ಉಡುಪಿ ಜಿಲ್ಲೆ ಉದ್ಯಾವರದ ಸೌಂದರ್ಯ ಪ್ರತಿಭೆ ಆ್ಯಡ್ಲಿನ್ ಕಸ್ತಲಿನೊ ಅವರಿಗೆ ನಾಳೆ ಹುಟ್ಟೂರು ಉದ್ಯಾವರದಲ್ಲಿ ಸಾರ್ವಜನಿಕ ಅಭಿನಂದನೆ ನಡೆಯಲಿದೆ.

ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ನೇತೃತ್ವದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ, ಕಥೋಲಿಕ್ ಸಭಾ ಉದ್ಯಾವರ ಘಟಕ ಹಾಗೂ ಸ್ತ್ರೀ ಸಂಘಟನೆ ಉದ್ಯಾವರ ಘಟಕ ಇವುಗಳ ಸಹಕಾರದೊಂದಿಗೆ ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ‘ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆ’ಯಲ್ಲಿ ಭಾರಕವನ್ನು ಪ್ರತಿನಿಧಿಸಲಿರುವ ಆ್ಯಡ್ಲಿನ್ ಕೆಸ್ತಲಿನೋ ಅವರು ಉದ್ಯಾವರದ ಕೊರಂಗ್ರಪಾಡಿಯವರು. ಅಲ್ಫೋನ್ಸಸ್ ಕಸ್ತಲಿನೊ ಹಾಗೂ ಮೀರಾ ಕಸ್ತಲಿನೋ ಅವರ ಪುತ್ರಿ ಯಾಗಿರುವ ಆ್ಯಡ್ಲಿನ್, 1998ರಲ್ಲಿ ಜನಿಸಿದ್ದು, ತನ್ನ 15ನೇ ವಯಸ್ಸಿನಿಂದ ಮುಂಬೈಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರು, ಇದೇ ಕ್ಷೇತ್ರದ ವಿಎಸ್‌ಪಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಬಾಲ್ಯದಿಂದಲೂ ಪ್ರತಿಭಾನ್ವಿತೆ ಯಾಗಿರುವ ಈಗೆ ನಟನೆ, ಕೊರಿಯೊಗ್ರಾಫಿಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮುಂಬೈಯಲ್ಲಿ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ ಎಂದು ಸ್ಟೀವನ್ ಕುಲಾಸೊ ತಿಳಿಸಿದರು.

ಇದೀಗ ನಾಳೆ ಆಕೆಗೆ ಹುಟ್ಟೂರ ಅಭಿನಂದನೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಸಂಜೆ 5:30ಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಝ್ಸೇವಿಯರ್ ದೇವಾಲಯದ ವಠಾರದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ ಸಂಜೆ 4:15ಕ್ಕೆ ಅವರನ್ನು ಕೊರಂಗ್ರಪಾಡಿಯ ದೇವಯ್ಯ ಹೆಗ್ಡೆ ಕಾಂಪೌಂಡ್ ಬಳಿಯ ಅವರ ನಿವಾಸದಿಂದ ತೆರೆದ ವಾಹನಗಳ ಮೆರವಣಿಗೆಯಲ್ಲಿ ಇಗರ್ಜಿಗೆ ಕರೆ ತರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತದ ಕುಲಪತಿ ಅ.ವಂ. ಸ್ಟಾನಿ ಬಿ.ಲೋಬೊ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಎಸ್ಪಿ ವಿಷ್ಣುವರ್ಧನ್, ಕಾಪು ಶಾಸಕ ಲಾಲಾಜಿ ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉದ್ಯಮಿಗಳಾದ ಅಬ್ದುಲ್ ಜಲೀಲ್ ಸಾಹೇಬ್, ಲಿಯೋ ಡಿಸೋಜ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮೆಲ್ವಿನ್ ನೊರೊನ್ಹ, ಲೀನಾ ಮೆಂಡೋನ್ಸಾ, ರೊನಾಲ್ಡ್ ಡಿಸೋಜ, ರಾಯ್ಸ್ ಪೆರ್ನಾಂಡೀಸ್, ಜೂಲಿಯಾ ಡಿಸೋಜ, ಲಾರೆನ್ಸ್ ಡೇಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News