ಮುಂದಿನ ವಾರವೇ ತಡೆಗೋಡೆ ಕಾಮಗಾರಿ ಆರಂಭಕ್ಕೆ ಸಚಿವ ಬಸವರಾಜ ಸೂಚನೆ

Update: 2020-02-29 07:22 GMT

ಮಂಗಳೂರು, ಫೆ. 29: ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಈ ಬಾರಿ ಮಳೆಗಾಲದಲ್ಲಿ ಮತ್ತೆ ಯಾವುದೇ ದುರಂತ ಸಂಭವಿಸದಂತೆ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಂದಿನ ವಾರದಿಂದಲೇ ಆರಂಭಿಸಿ ತನಗೆ ಮಾಹಿತಿಯನ್ನು ನೀಡುವಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಚ್ಚನಾಡಿ ಲ್ಯಾಂಡ್‌ಫಿಲ್ ಘಟಕಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಅವರು ವಸ್ತುಸ್ಥಿತಿಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಆರಂಭಿಸಲು ವಿಳಂಬವಾದ ಬಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ತಕ್ಷಣ ಕ್ರಮ ಆಗದಿದ್ದರೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭ ಉಪಸ್ಥಿತರಿದ್ದ ಸ್ಥಳೀಯ ಕಾರ್ಪೊರೇಟರ್ ಸಂಗೀತ ಆರ್. ನಾಯಕ್, ತ್ಯಾಜ್ಯ ಘಟಕದಿಂದ ಮಂದಾರಕ್ಕೆ ಹರಿದು ಹೋಗುವ ಮಳೆ ನೀರಿಗೆ ಬದಲಿ ವ್ಯವ್ಥೆ ಮಾಡಬೇಕೆಂದು ಒತ್ತಾಯಿಸಿದರು. ತಕ್ಷಣ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಮಳೆಗಾಲಕ್ಕೆ ಮುಂಚಿತವಾಗಿ ಸೂಕ್ತ ಕ್ರಮಗಳು ಆಗಬೇಕು. ತಮ್ಮ ಮುಂದಿನ ಭೇಟಿಯ ವೇಳೆ ಈ ಸಮಸ್ಯೆಗಳಿಗೆ ಪರಿಹಾರ ದೊರಕಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಂತ್ರಸ್ತರಿಂದ ಪರಿಹಾರದಲ್ಲಿ ತಾರತಮ್ಯ ಆರೋಪ: ಕ್ರಮದ ಭರವಸೆ

ನಗರಾಭಿವೃದ್ಧಿ ಸಚಿವ ಬಸವರಾಜ ಅವರು ಶಾಸಕ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ನೂತನ ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಸ್ಥಳೀಯ ಕಾರ್ಪೊರೇಟರ್‌ಗಳು ಹಾಗೂ ಅಧಿಕಾರಿಗಳ ಜತೆ ಕಳೆದ ಮಳೆಗಾಲದಲ್ಲಿ ತ್ಯಾಜ್ಯ ಕುಸಿದು ಅವ್ಯವಸ್ಥೆಯ ಆಗರವಾಗಿರುವ ಮಂದಾರಕ್ಕೂ ಭೇಟಿ ನೀಡಿದರು.

ಈ ಸಂದರ್ಭ ಸಂತ್ರಸ್ತ ಗಣೇಶ್ ಎಂಬವರು ಸಚಿವರೆದುರು ಅಸಮಾಧಾನ ವ್ಯಕ್ತಪಡಿಸುತ್ತಾ, ಕಳೆದ ಒಂಭತ್ತು ತಿಂಗಳಿನಿಂದ ಇಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ತ್ಯಾಜ್ಯ ಕುಸಿದು ಇಲ್ಲಿ ಒಂದು ಮನೆ ಮಾತ್ರ ನೆಲ ಸಮ ಆಗಿದೆ. ಹಾಗಿದ್ದರೂ ಕೆಲವರಿಗೆ ಮನೆ ಮಂಜೂರು ಆಗಿದೆ. ಪರಿಹಾರದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿದರು.

ರಾಜೇಶ್ ಭಟ್ ಎಂಬವರು ಮಾತನಾಡಿ, ಇಲ್ಲಿ 27 ಕುಟುಂಬಗಳು ಸಂತ್ರಸ್ತವಾಗಿವೆ. ಅದರಲ್ಲಿ 18 ಮನೆಗಳವರು ಸರಕಾರದಿಂದ ಒದಗಿಸಲಾಗಿರುವ ಫ್ಲಾಟ್‌ನಲ್ಲಿದ್ದಾರೆ. ಎರಡು ಮನೆಯವರು ಇಲ್ಲೇ ವಾಸ್ತವ್ಯ ಮಾಡುವುದಾಗಿ ಹೇಳಿದ್ದಾರೆ. ಇದರ ಜತೆ ಇಲ್ಲಿನ ನಾಗಬನ, ಪಾರಂಪರಿಕ ಮನೆಯನ್ನು ಉಳಿಸಬೇಕಿದೆ. ಕಳೆದ ಒಂಭತ್ತು ತಿಂಗಳಿನಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದರು.
ಶಾಸಕ ಡಾ. ಭರತ್ ಶೆಟ್ಟಿ ಪ್ರತಿಕ್ರಿಯಿಸಿ ಯಾರಿಗೂ ಮನೆ ಇನ್ನೂ ಮಂಜೂರು ಆಗಿಲ್ಲ. ಪ್ರಕ್ರಿಯೆಗಳು ನಡೆಯುತ್ತಿಲ್ಲ. ಯಾರಿಗೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದರು.

ಸಚಿವರು ಇದಕ್ಕೆ ಪ್ರತಿಕ್ರಿಯಿಸಿ, ತಾರತಮ್ಯ ಆಗಿರುವ ಕುರಿತಂತೆ ಶಾಸಕರ ನೇತೃತ್ವದಲ್ಲಿ ಸಬೆ ನಡೆಸಿ ಯಾರಿಗೂ ಅನ್ಯಾಯ ಆಗದಂತೆ ಕ್ರಮ ವಹಿಸಬೇಕು. ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯವಾಗಿದ್ದಲ್ಲಿ ಹಾಗೂ ಪಾರಂಪರಿಂಕ ಮನೆ ಉಳಿಸಲು ಅಥವಾ ಪುನರ್ ನಿರ್ಮಾಣಕ್ಕೆ ಸಾಧ್ಯತೆ ಬಗ್ಗೆ ಮನಪಾದಿಂದ ತಕ್ಷಣ ಕ್ರಮ ವಹಿಸಲಾಗುವುದು ಎಂದು ಅಲ್ಲಿದ್ದ ಸಂತ್ರಸ್ತರಿಗೆ ಭರವಸೆ ನೀಡಿದರಲ್ಲದೆ, ತಕ್ಷಣ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರು, ಮೇಯರ್‌ಗೆ ಸೂಚನೆ ನೀಡಿದರು.
ಇಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರತಿಯೊಂದು ವಿವರವನ್ನು ತಮಗೆ ಫೋಟೋದೊಂದಿಗೆ ಮಾಹಿತಿಯನ್ನು ಒದಗಿಸು ವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News