ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ ಕೆ.ಕೆ. ಸರಳಾಯ ಆತ್ಮಹತ್ಯೆ

Update: 2020-02-29 13:54 GMT

ಉಡುಪಿ, ಫೆ. 29: ರಾಜ್ಯದ ಹಿರಿಯ ಸಹಕಾರಿ ಧುರೀಣ, ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಉದ್ಯಮಿ, ಹಿರಿಯ ಕಾಂಗ್ರೆಸಿಗ, ಉಡುಪಿಯ ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡ ಕೆ.ಕೃಷ್ಣರಾಜ ಸರಾಯ ಅವರು ಇಂದು ನಿಧನರಾಗಿದ್ದಾರೆ.

1933ರಲ್ಲಿ ಉಡುಪಿಯಲ್ಲಿ ಜನಿಸಿದ 87 ವರ್ಷ ವಯಸ್ಸಿನ ಕೆ.ಕೆ.ಸರಳಾಯ ಅವರು ಶನಿವಾರ ಅಪರಾಹ್ನ ಪಡಿಯಾಡಿಯಲ್ಲಿನ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಳಾಯರ ಪತ್ನಿ ತೀವ್ರ ಅಸ್ವಸ್ಥರಾಗಿದ್ದರೆ, ಅವರ ಇಬ್ಬರು ವಿವಾಹಿತ ಪುತ್ರಿಯರು ಬೆಂಗಳೂರು ಹಾಗೂ ಹೊರದೇಶ ದಲ್ಲಿದ್ದಾರೆ. ಅವರ ಅಂತ್ಯಕ್ರಿಯೆ ರವಿವಾರ ಬೆಳಗ್ಗೆ 11ಕ್ಕೆ ಉಡುಪಿ ಬೀಡಿನ ಗುಡ್ಡೆಯಲ್ಲಿ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಸಹಕಾರಿ ಕ್ಷೇತ್ರದಲ್ಲಿ ಕೆ.ಕೆ.ಸರಳಾಯ ರಾಜ್ಯದಲ್ಲೇ ಬಹಳ ದೊಡ್ಡ ಹೆಸರಾ ಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮಹಾಮಂಡಲ ನಿರ್ದೇಶಕ, ಉಡುಪಿ ಕೋಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಸ್ಕ್ವಾಡ್ಸ್‌ನ ಅಧ್ಯಕ್ಷ, ಉಡುಪಿ ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ನ ನಿರ್ದೇಶಕ, ಕೊರಂಗ್ರಪಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರಾಗಿ ಅನೇಕ ದಶಕಗಳ ಕಾಲ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಮುಂಚೂಣಿಯಲ್ಲಿದ್ದು ಶ್ರಮಿಸಿದ್ದರು.

ರಾಜಕೀಯದಲ್ಲೂ ಸುಧೀರ್ಘ ಕಾಲದಿಂದ ಸಕ್ರಿಯರಾಗಿದ್ದ ಸರಳಾಯ, ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತ, ಧುರೀಣರಾಗಿದ್ದರು. ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷರಾಗಿದ್ದ ಇವರು, ಟಿ.ಎ.ಪೈ, ಆಸ್ಕರ್ ಫೆರ್ನಾಂಡಿಸ್, ಮಲ್ಪೆಯ ಮಧ್ವರಾಜ್, ಮನೋರಮಾ ಮಧ್ವರಾಜ್, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಮೊದಲಾದ ರಾಷ್ಟ್ರ, ರಾಜ್ಯ ಮಟ್ಟದ ನಾಯಕ ರುಗಳ ಒಡನಾಡಿಯಾಗಿ ಕರಾವಳಿಯಲ್ಲಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದರು.

76ಬಡಗಬೆಟ್ಟು ಮಂಡಲ ಪಂಚಾಯಿತ್‌ನ ಮಂಡಲ ಪ್ರಧಾನರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಇವರು, ದಕ ಜಿಲ್ಲಾ ಟೆಲಿಕಾಮ್ ಸಲಹಾ ಸಮಿತಿ ಸದಸ್ಯ, ನೈಋತ್ಯ ರೈಲ್ವೆ ಪಾಲ್ಘಾಟ್ ವಿಭಾಗದ ಸಲಹಾ ಸಮಿತಿ ಸದಸ್ಯ, ಉಡುಪಿ ಮಂಗಳೂರು ಜಿಲ್ಲಾ ಸುಡುಮದ್ದು ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕೆ.ಕೆ.ಸರಳಾಯರು ಕಳೆದ ಅನೇಕ ದಶಕಗಳಿಂದ ಉಡುಪಿಯಲ್ಲಿ ಪಟಾಕಿ, ಸುಡುಮದ್ದುಗಳ ರಖಂ ಹಾಗೂ ಚಿಲ್ಲರೆ ಮಾರಾಟಗಾರರಾಗಿ ಪ್ರಸಿದ್ಧರಾ ಗಿದ್ದರು. ಎಂಎಸ್‌ಐಎಲ್, ಲೇಖಕ್ ಪುಸ್ತಕ ಸೇರಿದಂತೆ ನಾಡಿನ ಅನೇಕ ಪ್ರಸಿದ್ಧ ಕಂಪೆನಿಗಳ ಉತ್ಪನ್ನಗಳ ಅಧಿಕೃತ ವಿತರಕರಾಗಿದ್ದು ಉಡುಪಿಯ ಯಶಸ್ವಿ ಉದ್ಯಮಿ ಎನಿಸಿದ್ದರು.

ಕೆ.ಕೆ.ಸರಳಾಯರು ಕಳೆದ ಅನೇಕ ದಶಕಗಳಿಂದ ಉಡುಪಿಯಲ್ಲಿ ಪಟಾಕಿ, ಸುಡುಮದ್ದುಗಳ ರಖಂ ಹಾಗೂ ಚಿಲ್ಲರೆ ಮಾರಾಟಗಾರರಾಗಿ ಪ್ರಸಿದ್ಧರಾ ಗಿದ್ದರು. ಎಂಎಸ್‌ಐಎಲ್, ಲೇಖಕ್ ಪುಸ್ತಕ ಸೇರಿದಂತೆ ನಾಡಿನ ಅನೇಕ ಪ್ರಸಿದ್ಧ ಕಂಪೆನಿಗಳ ಉತ್ಪನ್ನಗಳ ಅಧಿಕೃತ ವಿತರಕರಾಗಿದ್ದು ಉಡುಪಿಯ ಯಶಸ್ವಿ ಉದ್ಯಮಿ ಎನಿಸಿದ್ದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಾಗಿಯೂ ಸಕ್ರಿಯರಾಗಿದ್ದರಲ್ಲದೇ, ಅನೇಕ ಪರ್ಯಾಯೋತ್ಸವಗಳಲ್ಲಿ ಪದಾಧಿಕಾರಿಯಾಗಿ ಮಾರ್ಗದರ್ಶನ ನೀಡಿದ್ದರು. ಉಡುಪಿ ರಂಗಭೂಮಿ ಸದಸ್ಯ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಪಣಿಯಾಡಿ ಯುವಕ ಮಂಡಲದ ಗೌರವ ಅಧ್ಯಕ್ಷ, ಉಡುಪಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್‌ಗಳ ಅಧ್ಯಕ್ಷ, ಪಣಿಯಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜ್ಯ ಸರಕಾರ 2018ರ ಡಿಸೆಂಬರ್‌ನಲ್ಲಿ ಇವರಿಗೆ ‘ಸಹಕಾರಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದ್ದರೆ, 2007ರಲ್ಲಿ ಮೈಸೂರಿನಲ್ಲಿ ನಡೆದ ಸಹಕಾರಿ ಚಳವಳಿಯ ಶತಮಾನೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇವರಿಗೆ ‘ಶ್ರೇಷ್ಠ ಸಹಕಾರಿ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಾಣಿಯೂರು ಪರ್ಯಾಯದಲ್ಲಿ ಶ್ರೀಕೃಷ್ಣ ನೃಸಿಂಹಾನುಗ್ರಹ ಪ್ರಶಸ್ತಿ, ಪುತ್ತಿಗೆ ಶ್ರೀಗಳಿಂದ ಸಂಮಾನ ಹಾಗೂ ಉಡುಪಿಯ ಎಲ್ಲ ಮಠಾಧೀಶರಿಂದ ಸಂಮಾನಿಸಲ್ಪಟ್ಟಿದ್ದರು. ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಂಮಾನ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಸಂತಾಪಗಳ ಮಹಾಪೂರ: ಕೃಷ್ಣರಾಜ ಸರಳಾಯರ ನಿಧನಕ್ಕೆ ಅದಮಾರು, ಪುತ್ತಿಗೆ, ಪೇಜಾವರ, ಕಾಣಿಯೂರು, ಕೃಷ್ಣಾಪುರ, ಸೋದೆ, ಪಲಿಮಾರು, ಭಂಡಾರಕೇರಿ ಮಠಗಳ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿ,ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವರಾದ ಮನೋರಮಾ ಮಧ್ವರಾಜ್, ಎಚ್.ಕೆ.ಪಾಟೀಲ್, ವಿನಯ ಕುಮಾರ ಸೊರಕೆ, ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಶಾಸಕರಾದ ಯು.ಆರ್. ಸಭಾಪತಿ, ಕೆ.ಗೋಪಾಲ ಪೂಜಾರಿ, ಬಸವರಾಜ್,ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ , ಸಂಸದೆ ಶೋಬಾ ಕರಂದ್ಲಾಜೆ , ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ ರಘುಪತಿ ಭಟ್, ಲಾಲಾಜಿ ಮೆಂಡನ್, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಡಿ, ಬಿ.ಎಂ.ಸುಕುಮಾರ ಶೆಟ್ಟಿ, ಎಂ. ಎನ್. ರಾಜೇಂದ್ರ ಕುಮಾರ್, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ ಜಯಕರ ಶೆಟ್ಟಿ ಇಂದ್ರಾಳಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಶಂಭು ಶೆಟ್ಟಿ, ಅಶೋಕ್ಕುಮಾರ್ ಕೊಡವೂರು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ರಂಗಭೂಮಿ, ಕರಂಬಳ್ಳಿ ಬ್ರಾಹ್ಮಣ ಸಮಿತಿ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News