‘ದೊರೆಸ್ವಾಮಿ ನಿಂದನೆ; ಯತ್ನಾಳ್ ಶಾಸಕತ್ವ ಉಚ್ಚಾಟನೆವರೆಗೆ ಪ್ರತಿಭಟನೆ’

Update: 2020-02-29 12:45 GMT

ಮಂಗಳೂರು, ಫೆ.29: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಕಲಿ ಹೋರಾಟಗಾರ, ಪಾಕ್ ಏಜೆಂಟ್ ಎಂದು ಅವಹೇಳನ ಮಾಡಿದ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಾಸಕತ್ವದಿಂದ ಉಚ್ಚಾಟನೆ ಮಾಡುವವರೆಗೆ ವಿಧಾನಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಎಚ್ಚರಿಸಿದ್ದಾರೆ.

ನಗರದ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟಗಾರರ ಕುರಿತು ಕೀಳು ಹೇಳಿಕೆ ನೀಡಿದ ಯತ್ನಾಳ್ ವಿರುದ್ಧ ಈಗಾಗಲೇ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕಿತ್ತು. ಕೇಸ್ ದಾಖಲಿಸದೆ ಇದ್ದುದರಿಂದಲೇ ಅವರು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

‘ಯತ್ನಾಳ್ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳುತ್ತಾರೆ, ಇನ್ನೊಂದೆಡೆ ಅವರದ್ದೇ ಪಕ್ಷದ ಸಚಿವರು ಯತ್ನಾಳ್ ಹೇಳಿಕೆ ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿಗೆ ಸಂಬಂಧವಿಲ್ಲ ಎಂದಾಗಿದ್ದರೆ ಇನ್ನೂ ಯಾಕೆ ಅವರನ್ನು ಪಕ್ಷದಲ್ಲೇ ಇಟ್ಟುಕೊಂಡಿದ್ದೀರಿ, ವಜಾಗೊಳಿಸಿ ಎಂದು ಐವನ್ ಆಗ್ರಹಿಸಿದರು.

ಸ್ವಾತಂತ್ರ ಹೋರಾಟದ ಸಾವು-ನೋವು ಅನುಭವಿಸಿ ಗೊತ್ತಿಲ್ಲದವರು ಮಾತ್ರ ದೊರೆಸ್ವಾಮಿ ಅವರಿಂದ ಸ್ವಾತಂತ್ರ ಹೋರಾಟದ ಬಗ್ಗೆ ದಾಖಲೆ ಕೇಳುತ್ತಾರೆ ಎಂದು ಕಿಡಿಕಾರಿದರು.

ಪೌರತ್ವ ಕಾಯ್ದೆಗಳನ್ನು ಜಾರಿಗೊಳಿಸದಂತೆ ರಾಜ್ಯ ವಿಧಾನ ಪರಿಷತ್‌ನಲ್ಲಿ ಮಾರ್ಚ್ 4ರಂದು ನಿರ್ಣಯ ಮಂಡನೆಗೆ ಅವಕಾಶ ಕೋರಿ ನೋಟಿಸ್ ನೀಡಿದ್ದೇವೆ. ಅಂದು ನಿರ್ಣಯ ಕೈಗೊಳ್ಳಲು ಅಹವಾಲು ಮಂಡಿಸಲಾಗುವುದು ಎಂದರು.

ರಾಜ್ಯದಲ್ಲಿ ಪ್ರವಾಹದಿಂದಾಗಿ 36 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರಕ್ಕೆ ಕಳುಹಿಸಿದ ವರದಿಯಲ್ಲಿ ಉಲ್ಲೇಖಿಸಿ ದ್ದರೂ ಕೇಂದ್ರದಿಂದ ಸಿಕ್ಕಿದ್ದು ಕೇವಲ 1,869 ಕೋಟಿ ರೂ.ಮಾತ್ರ. ಇದನ್ನು ಹೊರತುಪಡಿಸಿ ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರದಿಂದ 35 ಸಾವಿರ ಕೋಟಿ ರೂ.. ರಾಜ್ಯಕ್ಕೆ ಬರಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿ ನೌಕರರಿಗೆ ವೇತನ ನೀಡಲೂ ದುಡ್ಡಿಲ್ಲದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆ ಆಗುವಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

‘ದೆಹಲಿ ಹಿಂಸಾಚಾರಕ್ಕೆ ಬಿಜೆಪಿ ಹೊಣೆ’

ದೇಶದ ಶೇ.60ಕ್ಕೂ ಹೆಚ್ಚಿನ ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಲು ಒಪ್ಪಿಲ್ಲ. ಆದರೂ ಬಿಜೆಪಿ ಜನಪ್ರತಿಧಿಗಳು, ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡಿ ಪೊಲೀಸರಿಗೆ ನಿರ್ದೇಶನ ನೀಡಿ ದೆಹಲಿಯಲ್ಲಿ ಹಿಂಸಾಚಾರ- ಸಾವುಗಳು ಸಂಭವಿಸಿವೆ. 45 ಮಂದಿಯ ಸಾವಿಗೆ ಬಿಜೆಪಿ ನೇರ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು. ಕೂಡಲೇ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ನಝೀರ್ ಬಜಾಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News