ಹಿಂಸಾಚಾರ ಸಂತ್ರಸ್ತರಿಗೆ ಕ್ಯಾಂಪಸ್ ನಲ್ಲಿ ಆಶ್ರಯ ನೀಡಬೇಡಿ: ವಿದ್ಯಾರ್ಥಿಗಳಿಗೆ ಜೆಎನ್ ಯು ಆಡಳಿತ ಎಚ್ಚರಿಕೆ

Update: 2020-02-29 13:31 GMT

ಹೊಸದಿಲ್ಲಿ, ಫೆ.29: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಸಂತ್ರಸ್ತರಿಗೆ ಜೆಎನ್‌ಯು ಆವರಣದಲ್ಲಿ ಆಶ್ರಯ ನೀಡಬಾರದು ಎಂದು ಜೆಎನ್‌ಯು ಆಡಳಿತ ವಿದ್ಯಾರ್ಥಿ ಸಂಘಟನೆಗೆ ಎಚ್ಚರಿಕೆ ನೀಡಿದೆ.

ಜೆಎನ್‌ಯು ಆವರಣವನ್ನು ಆಶ್ರಯತಾಣವಾಗಿಸಲು ಜೆಎನ್‌ಯು ವಿದ್ಯಾರ್ಥಿ ಸಂಘ(ಜೆಎನ್‌ಎಸ್‌ಯು)ಕ್ಕೆ ಯಾವುದೇ ನ್ಯಾಯಸಮ್ಮತ ಹಕ್ಕು ಇಲ್ಲ. ಯಾವುದೇ ವಿದ್ಯಾರ್ಥಿ ಇಂತಹ ಪ್ರಯತ್ನಗಳಲ್ಲಿ ಶಾಮೀಲಾಗಿರುವುದು ಕಂಡುಬಂದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಜೆಎನ್‌ಯುನಂತಹ ಶಿಕ್ಷಣ ಸಂಸ್ಥೆಯನ್ನು ಅಧ್ಯಯನ ಮತ್ತು ಸಂಶೋಧನೆ ನಡೆಸಲು ಇರುವ ಸ್ಥಳ ಎಂಬ ಹಿರಿಮೆಯನ್ನು ಎತ್ತಿಹಿಡಿಯಬೇಕು ಎಂದು ಜೆಎನ್‌ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ಆಶ್ರಯ ನೀಡಲಾಗುವುದು ಎಂಬ ವಿದ್ಯಾರ್ಥಿ ಸಂಘದ ಹೇಳಿಕೆಯಿಂದ ತಮ್ಮಲ್ಲಿ ಅಭದ್ರತೆಯ ಭಾವನೆ ಮೂಡಿದೆ ಎಂದು ಕ್ಯಾಂಪಸ್‌ನ ನಿವಾಸಿಗಳು ದೂರಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕ್ಯಾಂಪಸ್‌ನ ನಿವಾಸಿಗಳಿಗೆ ಆಗುವ ಯಾವುದೇ ರೀತಿಯ ಅನಾನುಕೂಲತೆ ಅಥವಾ ತೊಂದರೆಗೆ ವಿದ್ಯಾರ್ಥಿಸಂಘವೇ ಹೊಣೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಮಧ್ಯೆ, ಶನಿವಾರ ದಿಲ್ಲಿ ವಿವಿ ವಿದ್ಯಾರ್ಥಿಗಳು ಕೋಮು ಸೌಹಾರ್ದತೆಗೆ ಕರೆ ನೀಡಿ ವಿವಿಯ ಕ್ಯಾಂಪಸ್‌ನಲ್ಲಿ ಶಾಂತಿ ರ್ಯಾಲಿಯನ್ನು ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News