ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜರ್ಮನ್ ವಿದ್ಯಾರ್ಥಿಯ ವೀಸಾ ರದ್ದು

Update: 2020-02-29 14:12 GMT
ಫೋಟೊ ಕೃಪೆ: //www.facebook.com/chintabar/

ಹೊಸದಿಲ್ಲಿ, ಫೆ.29: ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಮದ್ರಾಸ್ ಐಐಟಿಯಲ್ಲಿ ಅಧ್ಯಯನ ನಡೆಸುತ್ತಿದ್ದ ಜರ್ಮನ್ ವಿದ್ಯಾರ್ಥಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಆತನ ವೀಸಾವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಜಾಕೋಬ್ ಲಿಂಡೆಂಥಲ್ ಎಂಬ ಜರ್ಮನ್ ವಿದ್ಯಾರ್ಥಿ , ಡಿಸೆಂಬರ್ 26ರಂದು ಚೆನ್ನೈಯಲ್ಲಿ ನಡೆದಿದ್ದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಜಾಕೋಬ್ ಪಾಲ್ಗೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜರ್ಮನಿಗೆ ವಾಪಾಸು ಕಳುಹಿಸಲಾಗಿತ್ತು. ಇದೀಗ ವೀಸಾವನ್ನು ರದ್ದುಗೊಳಿಸಿರುವುದಾಗಿ ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಆದರೆ ಯಾವುದೇ ಕಾರಣ ನೀಡಿಲ್ಲ ಎಂದು ಜಾಕೋಬ್ ಹೇಳಿದ್ದಾರೆ. ಜಾಕೋಬ್‌ನ ವೀಸಾ ಈಗ ಅಧಿಕೃತವಾಗಿ ರದ್ದಾಗಿದ್ದು ಆತ ಶೈಕ್ಷಣಿಕ ವಿನಿಮಯ ಯೋಜನೆಯಡಿ ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆದರೆ ಐಐಟಿ ಮದ್ರಾಸ್‌ನಲ್ಲಿ ಒಂದು ಸೆಮಿಸ್ಟರ್ ಪೂರ್ಣಗೊಳಿಸಿದ್ದ ಕಾರಣ ಆತ ದಾಖಲೆಗಳ ಲಿಪ್ಯಂತರ ಅಥವಾ ನಕಲು ಪ್ರತಿ ಪಡೆಯಬಹುದು ಎಂದು ಜರ್ಮನಿಯ ಡ್ರೆಸ್ಡನ್ ಐಐಟಿಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಶೈಕ್ಷಣಿಕ ವಿನಿಮಯ ಯೋಜನೆಯಡಿ ಮದ್ರಾಸ್ ಐಐಟಿಗೆ 2019ರ ಜುಲೈಯಲ್ಲಿ ಸೇರ್ಪಡೆಯಾಗಿದ್ದ ಜಾಕೋಬ್, ಈ ವರ್ಷದ ಮೇಯಲ್ಲಿ ಅಧ್ಯಯನ ಪೂರ್ಣಗೊಳಿಸಬೇಕಿತ್ತು. ಆತನ ವೀಸಾ ಅವಧಿ 2020ರ ಜೂನ್ 27ಕ್ಕೆ ಮುಕ್ತಾಯವಾಗಬೇಕಿತ್ತು. ವೀಸಾ ರದ್ದುಗೊಳಿಸಿರುವ ನಿರ್ಧಾರದಲ್ಲಿ ಐಐಟಿಯ ಪಾತ್ರವಿಲ್ಲ. ವಲಸೆ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ನಿರ್ಧರಿಸಿದ್ದಾರೆ ಎಂದು ಮದ್ರಾಸ್ ಐಐಟಿಯ ನಿರ್ದೇಶಕ ಭಾಸ್ಕರ್ ರಾಮಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News