ರೋಟರ್ಯಾಕ್ಟ್ ಸಂಸ್ಥೆಗಳ ‘ಸ್ನೇಹ ಸಂಚಯ’ ಉದ್ಘಾಟನೆ
ಮಂಗಳೂರು ಫೆ. 29: ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ 2 ದಿನಗಳ ಅವಧಿಯ ರೋಟರ್ಯಾಕ್ಟ್ ಸಂಸ್ಥೆಗಳ ಜಿಲ್ಲಾ 3181ರ 3ನೇ ವಾರ್ಷಿಕ ಸಮಾವೇಶ (ಸ್ನೇಹ ಸಂಚಯ) ಶನಿವಾರ ನಗರದ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಂತರ್‌ರಾಷ್ಟ್ರೀಯ ರೋಟರಿ ಜಿಲ್ಲಾ 3181ರ ಗವರ್ನರ್ ಜೋಸೆಫ್ ಮ್ಯಾಥ್ಯೂ ರೋಟರ್ಯಾಕ್ಟ್ ಸಂಸ್ಥೆಯು ಯುವಕರ ವ್ಯಕ್ತಿತ್ವ ಮತ್ತು ಪ್ರತಿಭಾ ವಿಕಸನಕ್ಕೆ ಸೂಕ್ತ ವೇದಿಕೆಯಾಗಿದೆ. ಸದಸ್ಯರ ಪರಸ್ಪರ ಸ್ನೇಹ, ವಿಶ್ವಾಸ, ಒಡನಾಟಕ್ಕೆ ಪೂರಕವಾಗಿದ್ದು, ಸಂಸ್ಥೆಯ ಪ್ರಗತಿಗೆ ಸದಸ್ಯರು ಕ್ರಿಯಾಶೀಲರಾಗಿ ಭಾಗವಹಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಹಾಯಕ ಗವರ್ನರ್ ಗೀತಾನಂದ ಪೈ, ಜಿಲ್ಲಾ ರೋಟರ್ಯಾಕ್ಟ್ ಅಧ್ಯಕ್ಷ ಯತೀಶ್ ಬೈಕಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್ ವರದಿ ವಾಚಿಸಿದರು. ಸಂಘಟನಾ ಅಧ್ಯಕ್ಷ ಪವನ್ ಮಂಜೇಶ್ವರ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಅತಿಥೇಯ ರೋಟರ್ಯಾಕ್ಟ್ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ, ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭ ಸ್ಫೂರ್ತಿ ದಿವ್ಯಾಂಗ ಕಲಾ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ಸುಬ್ರಮಣಿ ವಂದಿಸಿದರು. ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.