×
Ad

ಆಧುನಿಕ ಕವಿತೆಗಳಲ್ಲಿ ಸತ್ವವಿದೆ: ಎಚ್.ಎನ್.ಆರತಿ

Update: 2020-02-29 21:20 IST

ಮಂಗಳೂರು, ಫೆ.29: ‘ಅಂತರಂಗದ ತುಮುಲಗಳನ್ನು ವ್ಯಂಜಿಸುವ ಭಾವನಾತ್ಮಕ ಕವಿತೆಗಳ ಕಾಲ ಕಳೆದು ಹೋಯಿತು. ಈಗಿನ ಬಹುತೇಕ ಕವಿಗಳು ಪ್ರತಿಭಾಶಾಲಿಗಳಾಗಿದ್ದಾರೆ. ಹಾಗಾಗಿ ಆಧುನಿಕ ಕವಿತೆಗಳಲ್ಲಿ ಸಾಕಷ್ಟು ಸತ್ವ ತುಂಬಿಕೊಂಡಿರುತ್ತದೆ ಎಂದು ಕವಯಿತ್ರಿ ಎಚ್.ಎನ್.ಆರತಿ ಹೇಳಿದ್ದಾರೆ.

ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ‘ಬಹುಭಾಷಾ ಕವಿಗೋಷ್ಠಿ: ಕಾವ್ಯ-ಗಾನ-ಕುಂಚ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ‘ಎಲ್ಲಾ ಭಾಷೆಗಳ ಮೂಲದ್ರವ್ಯ ಒಂದೇ. ವಿವಿಧ ಭಾಷೆಗಳ ಕವಿತೆಗಳನ್ನು ಗಾಯಕರು ಹಾಡುವಾಗ ಅವೆಲ್ಲ ಒಂದೇ ಎಂಬಂತೆ ಭಾಸವಾಗುತ್ತದೆ. ಭಾಷೆಗಳ ವ್ಯತ್ಯಾಸವೇ ತಿಳಿಯುವುದಿಲ್ಲ ಎಂದು ಆರತಿ ಅಭಿಪ್ರಾಯಪಟ್ಟರು.

ಅಬ್ಬಕ್ಕ ಉತ್ಸವದ ಶೀರ್ಷಿಕೆ ಗೀತೆಯಾಗಿ ಭಾಸ್ಕರ ರೈ ಕುಕ್ಕುವಳ್ಳಿ ರಚಿಸಿದ ‘ಬನ್ನಿ ಅಬ್ಬಕ್ಕನ ನಾಡಿಗೆ..’ ಕಾವ್ಯಗಾಯನದೊಂದಿಗೆ ಬಹುಭಾಷಾ ಕವಿಗೋಷ್ಠಿ ಆರಂಭಗೊಂಡಿತು. ಕವಿಗಳಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸೋಮನಿಂಗ ಎಚ್. ಹಿಪ್ಪರಗಿ (ಕನ್ನಡ), ಅತ್ತಾವರ ಶಿವಾನಂದ ಕರ್ಕೇರ, ವಸಂತಿ ಟಿ.ನಿಡ್ಲೆ (ತುಳು), ಫೆಲ್ಸಿ ಲೋಬೋ (ಕೊಂಕಣಿ), ಆಯಿಶಾ ಯು.ಕೆ. ಉಳ್ಳಾಲ (ಬ್ಯಾರಿ), ಡಾ.ಸುರೇಶ ನೆಗಳಗುಳಿ (ಹವ್ಯಕ), ಕಾ.ವೀ.ಕೃಷ್ಣದಾಸ್ (ಕುಂದ ಕನ್ನಡ) ಮತ್ತು ಪುದಿಯ ನೆರವನ ರೇವತಿ ರಮೇಶ್ (ಅರೆ ಭಾಷೆ) ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಗಾಯಕರಾದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸಂಗೀತಾ ಬಾಲಚಂದ್ರ ಈ ಕವನಗಳನ್ನು ಸ್ವರಬದ್ಧಗೊಳಿಸಿ ಹಾಡಿದರು. ಸತೀಶ್ ಸುರತ್ಕಲ್ (ಕೀಬೋರ್ಡ್), ದೀಪಕ್ ರಾಜ್ ಉಳ್ಳಾಲ್ (ತಬ್ಲಾ), ನವಗಿರಿ ಗಣೇಶ್ (ರಿದಂ ಪ್ಯಾಡ್) ಸಂಗೀತ ಸಹಕಾರ ನೀಡಿದರು. ಈ ಕುಂಚ ಕಲಾವಿದ ಮುರಳೀಧರ ಆಚಾರ್ಯ ಕವಿತೆಗಳ ಸನ್ನಿವೇಶಕ್ಕೆ ತಕ್ಕ ಚಿತ್ರಗಳನ್ನು ಬಿಡಿಸಿ ರಂಜಿಸಿದರು.

ಕಾರ್ಯಕ್ರಮದ ಸಂಯೋಜಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕವಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ನಮಿತಾ ಶ್ಯಾಂ ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ಬಿ.ಶೆಟ್ಟಿ, ಸುವಾಸಿನಿ ಬಬ್ಬುಕಟ್ಟೆ, ಕೆ.ಲಕ್ಷ್ಮಿನಾರಾಯಣ ರೈ ಹರೇಕಳ, ಆನಂದ ಶೆಟ್ಟಿ ಉಪಸ್ಥಿತರಿದ್ದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News