ಮಂಗಳೂರು: 'ಸ್ನೇಹದೀಪ' ತಬಸ್ಸುಮ್‌ಗೆ ಪ್ರೆಸ್‌ಕ್ಲಬ್ ಪ್ರಶಸ್ತಿ ಪ್ರದಾನ
ಮಂಗಳೂರು, ಫೆ.29: ಎಚ್‌ಐವಿ ಪೀಡಿದ ಅನಾಥ ಮಕ್ಕಳ ಪೋಷಣೆ ಮಾಡುತ್ತಿರುವ ಸಮಾಜ ಸೇವಕಿ ‘ಸ್ನೇಹ ದೀಪ’ ಸಂಸ್ಥೆಯ ಸ್ಥಾಪಕಿ ತಬಸ್ಸುಮ್ ಅವರಿಗೆ ಉರ್ವ ಮಾರಿಗುಡಿ ರಸ್ತೆಯಲ್ಲಿರುವ ಶ್ರೀರಾಧಾಕೃಷ್ಣ ಮಂದಿರದಲ್ಲಿ ಶನಿವಾರ ನಡೆದ ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆ ಸಂದರ್ಭ ಪ್ರೆಸ್‌ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತಬಸ್ಸುಮ್ ಸಂಸ್ಥೆಯಲ್ಲಿ ಎಚ್‌ಐವಿ ಪೀಡಿತ 26 ಅನಾಥ ಮಕ್ಕಳಿದ್ದಾರೆ. ನಾಲ್ವರು ಮಕ್ಕಳು ಜೀವನದ ಅಂತಿಮ ಕ್ಷಣದಲ್ಲಿದ್ದಾರೆ. ಇದುವರೆಗೆ 19 ಮಕ್ಕಳನ್ನು ಕಳೆದುಕೊಂಡಿದ್ದೇವೆ. ಸಂಸ್ಥೆಗೆ ಯಾವುದೇ ಆದಾಯವಿಲ್ಲ. ಬಾಡಿಗೆ ಕಟ್ಟಡದಲ್ಲಿ ಸ್ನೇಹ ದೀಪ ಸಂಸ್ಥೆ ಮುನ್ನಡೆಯುತ್ತಿದೆ. ದಾನಿಗಳ ನೆರವು ಬೇಕಾಗಿದೆ. ಪ್ರಶಸ್ತಿ ಸಮಾಜ ಸೇವೆಗೆ ಇನ್ನಷ್ಟು ಪ್ರೇರಣೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರ ನಟ ರೂಪೇಶ್ ಶೆಟ್ಟಿ ಒಳ್ಳೆಯ ಕೆಲಸ ಮಾಡಿದಾಗ ಪ್ರೋತ್ಸಾಹ ನೀಡಿರಿ. ತಪ್ಪು ಮಾಡಿದಾಗ ಎಚ್ಚರಿಸುವ ಮೂಲಕ ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡುತ್ತಿರುವುದು ಸಮಾಜದ ಬೆಳವಣಿಗೆಗೆ ಪೂರಕ ಎಂದರು.
ಡಿಸಿಪಿ ಲಕ್ಷ್ಮಿಗಣೇಶ್ ಪ್ರಶಸ್ತಿ ಪ್ರದಾನ ಮಾಡಿದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಮನೋಹರ ಪ್ರಸಾದ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಆರ್.ರಾಮಕೃಷ್ಣ, ಇಬ್ರಾಹೀಂ ಅಡ್ಕಸ್ಥಳ, ಬಿ.ಎನ್.ಪುಷ್ಪರಾಜ್, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಎಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85 ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ, ಆತ್ಮಭೂಷಭ್ ಭಟ್, ಆರ್.ಸಿ.ಭಟ್ ಪ್ರಶಸ್ತಿ ಪುರಸ್ಕೃತರ ಪರಿಚಯಗೈದರು. ಪ್ರೆಸ್‌ಕ್ಲಬ್ ಲೆಕ್ಕಪರಿಶೋಧಕ ಹರೀಶ್ ಮೋಟುಕಾನ ವಂದಿಸಿದರು. ಉಪಾಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.