ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಮೆಲಾನಿಯಾ ಟ್ರಂಪ್
ವಾಶಿಂಗ್ಟನ್, ಫೆ. 29: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಭಾರತದಲ್ಲಿ ತನಗೆ ನೀಡಲಾದ ಆತ್ಮೀಯ ಸ್ವಾಗತಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೆ ಧನ್ಯವಾದ ಸಲ್ಲಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
‘‘ರಾಷ್ಟ್ರಪತಿ ಭವನದಲ್ಲಿ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ರಾಷ್ಟ್ರಪತಿ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್‌ಗೆ ಧನ್ಯವಾದಗಳು. ಅದು ನಮ್ಮೆರಡು ದೇಶಗಳ ನಡುವಿನ ಸ್ನೇಹವನ್ನು ಸಂಭ್ರಮಿಸಿದ ಸುಂದರ ದಿನವಾಗಿತ್ತು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘‘ನಾನು ಮತ್ತು ಅಮೆರಿಕ ಅಧ್ಯಕ್ಷರನ್ನು ನಿಮ್ಮ ಸುಂದರ ದೇಶಕ್ಕೆ ಸ್ವಾಗತಿಸಿರುವುದಕ್ಕಾಗಿ ನರೇಂದ್ರ ಮೋದಿಗೆ ಧನ್ಯವಾದಗಳು. ನಿಮ್ಮಿಂದ ಮತ್ತು ಭಾರತದ ಜನತೆಯಿಂದ ಈ ರೀತಿಯ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿರುವುದಕ್ಕೆ ನಮಗೆ ಸಂತೋಷವಾಗಿದೆ’’ ಎಂದು ಮೆಲಾನಿಯಾ ಟ್ರಂಪ್ ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಅಮೆರಿಕಕ್ಕೆ ಹಿಂದಿರುಗುವ ಮೊದಲು ಡೊನಾಲ್ಡ್ ಮತ್ತು ಮೆಲಾನಿಯಾ ಟ್ರಂಪ್ ದಿಲ್ಲಿಯಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ್ದರು. ‘‘ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ, ಸುಂದರ ರಾಜ್‌ಘಾಟ್ ಸ್ಮಾರಕಕ್ಕೆ ಹೂಮಾಲೆ ಹಾಕುವ ಹಾಗೂ ಗಿಡವೊಂದನ್ನು ನೆಡುವ ಅವಕಾಶ ಲಭಿಸಿರುವುದು ನಮಗೆ ಸಿಕ್ಕ ಗೌರವವಾಗಿದೆ’’ ಎಂಬುದಾಗಿ ಮೆಲಾನಿಯಾ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ದಿಲ್ಲಿಯ ಸರಕಾರಿ ಶಾಲೆಯೊಂದರ ‘ಸಂತೋಷದ ತರಗತಿ’ಯಲ್ಲಿ ಭಾಗವಹಿಸಲು ಹೋದ ಮೆಲಾನಿಯಾ ಟ್ರಂಪ್‌ಗೆ ಶಾಲೆಯಲ್ಲಿ ಮಾರ್ಗದರ್ಶನ ನೀಡಿದ ಆ ಶಾಲೆಯ ಶಿಕ್ಷಕಿ ಮನು ಗುಲಾಟಿಗೂ ಮೆಲಾನಿಯಾ ಧನ್ಯವಾದ ಹೇಳಿದ್ದಾರೆ.