×
Ad

ವೀರರಾಣಿ ಅಬ್ಬಕ್ಕ ಉತ್ಸವ- 2020ಕ್ಕೆ ಚಾಲನೆ

Update: 2020-02-29 22:32 IST

ಕೊಣಾಜೆ: ಅಬ್ಬಕ್ಕ ಎಂದರೆ ಶಕ್ತಿ. ಮಹಿಳೆಯರಿಗೆ ಸ್ಪೂರ್ತಿ.  ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಪ್ರಥಮ ಮಹಿಳಾ ಹೋರಾಟಗಾರ್ತಿ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಎನ್ನುವುದು  ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಹೋರಾಟಗಾರ್ತಿ ರಾಷ್ಟ್ರ ಪ್ರೇಮ ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ನಡೆದ ವೀರರಾಣಿ ಅಬ್ಬಕ್ಕ ಉತ್ಸವ- 2020ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ವೀರರಾಣಿ ಅಬ್ಬಕ್ಕನ ಹೋರಾಟದ ಕಿಚ್ಚಿನಿಂದ ಪೋರ್ಚುಗೀಸರು ಕೂಡಾ ಬೆದರಿದ್ದರು. ಇಂದು ಬಹಳಷ್ಟು ಹೋರಾಟಗಾರರ ಇತಿಹಾಸವನ್ನು ನೋಡುತ್ತೇವೆ. ಇವರೆಲ್ಲರಿಗಿಂತ  ಅಬ್ಬಕ್ಕ ವಿಶೇಷವಾಗಿ ಕಾಣುತ್ತಾರೆ.ಅವರ ಹೋರಾಟದಲ್ಲಿ , ಗುಣದಲ್ಲಿಯೂ ವಿಶೇಷತೆಯನ್ನು ಕಾಣಬಹುದು ಎಂದು ಹೇಳಿದರು.

ಪ್ರಶಸ್ತಿ ಯನ್ನು ಕೇಳಿ ಪಡೆಯುವ ಕಾಲವಿತ್ತು. ಆದರೆ ಈ ಬಾರಿ ಕೇಂದ್ರ ಸರಕಾರ   ಬದುಕಿಗಾಗಿ ಕಾಡಿನ ರಕ್ಷಣೆ ಮಡಿದ ತುಳಸೀ ಗೌಡ ಹಾಗೂ ಕಿತ್ತಲೆ ಮಾರಾಟ ಮಾಡಿ ಶಾಲೆ ಕಟ್ಟಿಸಿದ ರಾಷ್ಟ್ರ ಮಟ್ಟದ ಅಕ್ಷರ ಸಂತ ಹರೇಕಳ ಹಾಜಬ್ಬರಂತಹ ಮಹಾನ್ ವ್ಯಕ್ತಿಗಳನ್ನು ಇದೇ ವೇದಿಕೆಯಲ್ಲಿ ಗುರುತಿಸಿರುವುದು ನಮಗೆಲ್ಲ ರಿಗೂ ಹೆಮ್ಮೆಯ ಸಂಗತಿಯಾಗಿದೆ.ಮುಂದಿನ ದಿನಗಳಲ್ಲಿ ಅಬ್ಬಕ್ಕ ಉತ್ಸವವು  ರಾಜ್ಯ ಉತ್ಸವ ಮತ್ತು ರಾಷ್ಟ್ರ ಉತ್ಸವವಾಗಿ ಮೂಡಿಬರುವಂತಾಗಲಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ ಅಬ್ಬಕ್ಕ ಉತ್ಸವದ ಮೂಲಕ ನಮ್ಮ ನಾಡಿಗಾಗಿ ರಕ್ಷಣೆಗಾಗಿ ಹೋರಾಡಿದ ವೀರರಾಣಿ ಅಬ್ಬಕ್ಕನನ್ನು  ಕರ್ನಾಟಕ ಸರ್ಕಾರದ ವತಿಯಿಂದ ಅಬ್ಬಕ್ಕ ಉತ್ಸವದ ಮೂಲಕವ ಸ್ಮರಿಸುವ ಕಾರ್ಯ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಇತರ ರಾಣಿಯರ ಉತ್ಸವ ಬಹಳ ವಿಜ್ರಂಭಣೆಯಿಂದ ನಡೆಯುತ್ತಾ ಬರುತ್ತದೆ. ಉಳ್ಳಾಲ ವ್ಯಾಪ್ತಿಯು ಹಿಂದೆ ಮದ್ರಾಸು ಪ್ರಾಂತ್ಯ ಇದ್ದಿರುವುದರಿಂದ ವೀರಾರಾಣಿ ಅಬ್ಬಕ್ಕನನ್ನು  ಅಂದಿನ ಕಾಲದಲ್ಲಿ ಉಳಿದ ರಾಣಿಯಂತೆ ಕಾಣಲು ಸಾಧ್ಯವಾಗಿಲ್ಲ. ಅದರೂ‌ಖಾಸಗಿ ಸಮಿತಿಯಿಂದ ಅಬ್ಬಕ್ಕ ಉತ್ಸವವು ಇಂದು ಸರ್ಕಾರ ವತಿಯಿಂದ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಂಸ್ಕ್ರತಿಕ ಮೆರುಗಿನೊಂದಿಗೆ ನಡೆಯುವಂತಾಗಲಿ. ಅಲ್ಲದೆ ಅಬ್ಬಕ್ಕನ‌ ನಾಡಿನಲ್ಲಿ ಎಲ್ಲರೂ ಒಗ್ಗೂಡಿ ಬಾಳುವುದರೊಂದಿಗೆ ಸೌಹಾರ್ದ ಸಮಾಜ ಕಟ್ಟೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ  ಪದ್ಮಶ್ರೀ ಪುರಸ್ಕೃತರಾದ ತುಳಸೀ ಗೌಡ ಹಾಗೂ ಹರೇಕಳ ಹಾಜಬ್ಬ ಅವರನ್ನು ಅಭಿನಂದಿಸಲಾಯಿತು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಮಂಗಳೂರು ತಾಲೂಕು ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಅವರು ಸ್ವಾಗತಿಸಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ವಂದಿಸಿದರು.ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ನಾನು ನೂರಾರು ಗಿಡಗಳನ್ನು ತಂದು ಕಾಡಿನಲ್ಲಿ, ಪರಿಸರದಲ್ಲಿ ನೆಡುತ್ತಿದ್ದೆ.  ಎಲ್ಲರೂ ಗಿಡಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಬೆಳೆಸಬೇಕು.

- ತುಳಸೀ ಗೌಡ, ಪದ್ಮಶ್ರೀ ಪುರಸ್ಕೃತೆ.

ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಲಿ. ಪದ್ಮಶ್ರೀ ಪ್ರಶಸ್ತಿ ಈ ಬಡವನನ್ನು ಅರಸಿಕೊಂಡು ಬಂದಿರುವುದು ಸಂತಸ ತಂದಿದೆ. ಅಬ್ಬಕ್ಕನ ಉತ್ಸವ ನಿರಂತರವಾಗಿ ಇನ್ನು ವಿಜ್ರಂಭನೆಯಿಂದ ನಡೆಯುವಂತಾಗಲಿ.

- ಹರೇಕಳ ಹಾಜಬ್ಬ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News