ಬಂಟ್ವಾಳ: ಧರ್ಮ ಭೇದ ಮರೆತು ಮೃತ ವೃದ್ಧೆಯ ಅಂತಿಮ ಸಂಸ್ಕಾರ
ಬಂಟ್ವಾಳ, ಫೆ. 29: ಕುಟುಂಬದಿಂದ ದೂರ ಮಾಡಿದ್ದ ವೃದ್ಧ ಮಹಿಳೆಯ ಮೃತದೇಹವನ್ನು ಧರ್ಮ ಭೇದ ಮರೆತು ಊರಿನ ಜನರು ಒಟ್ಟು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ ಮಾನವೀಯ ಘಟನೆಯೊಂದು ಶನಿವಾರ ಮಾಣಿ ಸಮೀಪದ ಕೊಡಾಜೆಯಲ್ಲಿ ನಡೆದಿದೆ.
ಕೊಡಾಜೆ ಮಸೀದಿ ಸಮೀಪದ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದ ಇಬ್ಬರು ವೃದ್ಧ ಮಹಿಳೆಯರ ಪೈಕಿ ಒಬ್ಬರು ನಿನ್ನೆ ರಾತ್ರಿ ನಿಧನರಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಕೊಡಾಜೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ರಾಜ್ ಕಮಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಹಬೀಬ್ ಕೊಡಾಜೆ, ಹಾಜಿ ಉಮ್ಮರ್ ಫೈರೋಝ್, ಇಸ್ಮಾಯೀಲ್ ಫೈರೋಝ್, ಬದ್ರುದ್ದೀನ್ ಇನಾಮ್ ಮಾಣಿ, ಇಬ್ರಾಹಿಮ್, ರವೂಫ್ ಕೊಡಾಜೆ, ಬಾಲಕೃಷ್ಣ ಆಳ್ವ, ಜನಾರ್ಧನ, ತ್ವಾಹ, ತ್ವಾಹಿರ್, ರಾಝೀ, ರಾಫಿ ಮೊದಲಾದವರು ಖಾಸಗಿ ಆಂಬ್ಯುಲೆನ್ಸ್ ಕರೆಸಿ ಮೃತದೇಹವನ್ನು ಪುತ್ತೂರಿನ ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಬೇಕಾದ ಹಣವನ್ನು ಕೂಡಾ ಊರ ನಾಗರಿಕರೇ ಒಟ್ಟುಗೂಡಿಸಿದ್ದಾರೆ. ಅಲ್ಲದೆ ಮೃತ ಮಹಿಳೆಯ ಸಹೋದರಿ ಜಾನಕಿ ಅವರ ಬೇಡಿಕೆಯಂತೆ ಮೃತದೇಹವನ್ನು ಪುತ್ತೂರು ಹಿಂದೂ ರುದ್ರ ಭೂಮಿಯಲ್ಲಿ ಸುಡುವ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ಇಬ್ಬರು ಸಹೋದರಿಯರು ಸುಮಾರು 40 ವರ್ಷಗಳಿಂದ ಕೊಡಾಜೆಯಲ್ಲಿ ವಾಸವಾಗಿದ್ದಾರೆ. ಇವರ ತಾಯಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕರವನ್ನು ಕೂಡಾ ಕೊಡಾಜೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹೀಂ ರಾಜ್ ಕಮಲ್ ಅವರ ನೇತೃತ್ವದಲ್ಲಿ ನೆರವೇರಿಸಲಾಗಿತ್ತು. ಆ ಬಳಿಕ ಇಬ್ಬರು ಸಹೋದರಿಯರು ಮಾತ್ರ ಮನೆಯಲ್ಲಿ ವಾಸವಿದ್ದರು. ಆ ಪೈಕಿ ಒಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಶ್ರೀಮಂತ ಕುಟುಂಬಕ್ಕೆ ಸೇರಿದ ತಾಯಿ ಮತ್ತು ಈ ಇಬ್ಬರು ಮಕ್ಕಳನ್ನು ಕುಟುಂಬದಿಂದ ದೂರ ಮಾಡಲಾಗಿತ್ತು ಎಂದು ಸ್ಥಳೀಯರಾದ ಶಂಶೀರ್ ಬುಡೋಳಿ ಮಾಹಿತಿ ನೀಡಿದ್ದಾರೆ.