ಬಂಗಾಳಕ್ಕೆ ಮತ್ತೊಮ್ಮೆ ಆಸರೆಯಾದ ಮಜುಂದಾರ್

Update: 2020-03-01 04:58 GMT

ರಣಜಿ ಟ್ರೋಫಿ

ಕೋಲ್ಕತಾ, ಮಾ.1: ಮತ್ತೊಮ್ಮೆ ಅಗ್ರ ಸರದಿಯ ವೈಫಲ್ಯಕ್ಕೆ ಒಳಗಾದ ಬಂಗಾಳ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅನುಸ್ತುಪ್ ಮಜುಂದಾರ್ ಶತಕದ ಮೂಲಕ ಆಸರೆಯಾಗಿದ್ದಾರೆ. ಶನಿವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿಯ ಎರಡನೇ ಸೆಮಿ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 275 ರನ್ ಗಳಿಸಿದೆ.

ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಜೀವನಶ್ರೇಷ್ಠ 157 ರನ್ ಗಳಿಸಿ ಆಸರೆಯಾಗಿದ್ದ ಮಜುಂದಾರ್ ಶನಿವಾರ ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 120 ರನ್(173 ಎಸೆತ, 18 ಬೌಂಡರಿ, 1 ಸಿಕ್ಸರ್)ಸಿಡಿಸಿ ತಂಡವನ್ನು ಆಧರಿಸಿದರು. ಆತಿಥೇಯ ತಂಡ 13 ವರ್ಷಗಳ ಬಳಿಕ ಫೈನಲ್ ತಲುಪುವ ವಿಶ್ವಾಸದಲ್ಲಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ಅಳವಡಿಸಲಾಗಿರುವ ಡಿಆರ್‌ಎಸ್‌ನ ಮೂಲಕ ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಅವರು ಇನಿಂಗ್ಸ್‌ನ 16ನೇ ಎಸೆತದಲ್ಲಿ ಅಭಿಷೇಕ್ ರಮಣ್(0)ವಿಕೆಟನ್ನು ಉರುಳಿಸಿದರು. ಈಗ ನಡೆಯುತ್ತಿರುವ ರಣಜಿ ಟ್ರೋಫಿಯ ಎರಡು ಸೆಮಿ ಫೈನಲ್ ಪಂದ್ಯಗಳಲ್ಲಿ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಡಿಆರ್‌ಎಸ್ ಬಳಸಲಾಗುತ್ತಿದೆ. ಆದರೆ,ಇದರಲ್ಲಿ ಸೀಮಿತ ಆಯ್ಕೆಗಳಿದ್ದು, ಸ್ನೈಕೊಮೀಟರ್ ಅಥವಾ ಆಲ್ಟ್ರಾ ಎಡ್ಜ್‌ಗಳಿಲ್ಲ.

ಒಡಿಶಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿನ ವೈಫಲ್ಯವನ್ನೇ ಪುನರಾವರ್ತಿಸಿದ ಬಂಗಾಳ ಇಂದಿನ ಪಂದ್ಯದಲ್ಲಿ ಒಂದು ಹಂತದಲ್ಲಿ 66 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಅಭಿಮನ್ಯು ಈಶ್ವರನ್(15) ಹಾಗೂ ಮನೋಜ್ ತಿವಾರಿ(8)ಸಹಿತ ಎಲ್ಲ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕಳಪೆ ಹೊಡೆತಕ್ಕೆ ಕೈಹಾಕಿ ಪೆವಿಲಿಯನ್‌ಗೆ ಪರೇಡ್ ನಡೆಸಿದರು.

ರೋನಿತ್ ಮೋರೆ(2-45)ಕ್ರೀಸ್‌ನಲ್ಲಿ ನೆಲೆವೂರಿದ್ದ ಸುದೀಪ್ ಚಟರ್ಜಿ(20) ಹಾಗೂ ಶ್ರೀವಾಸ್ತವ ಗೋಸ್ವಾಮಿ(0)ವಿಕೆಟನ್ನು ನಾಲ್ಕು ಎಸೆತಗಳ ಅಂತರದಲ್ಲಿ ಕಬಳಿಸಿ ಬಂಗಾಳಕ್ಕೆ ತೀವ್ರ ಆಘಾತ ನೀಡಿದರು. ಲಂಚ್ ವಿರಾಮದ ವೇಳೆಗೆ ಬಂಗಾಳ 67 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

2016ರಲ್ಲಿ ಬಂಗಾಳ ತಂಡಕ್ಕೆ ವಾಪಸಾಗಿದ್ದ ಹಿರಿಯ ಬ್ಯಾಟ್ಸ್‌ಮನ್ ಮಜುಂದಾರ್ ಬಾಲಂಗೋಚಿ ಆಕಾಶ್ ದೀಪ್(44)ಅವರೊಂದಿಗೆ 9ನೇ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಮಜುಂದಾರ್‌ರೊಂದಿಗೆ ಆಲ್‌ರೌಂಡರ್ ಶಹಬಾಝ್ ಅಹ್ಮದ್ 8ನೇ ವಿಕೆಟ್‌ನಲ್ಲಿ 119 ಎಸೆತಗಳಲ್ಲಿ 72 ರನ್ ಜೊತೆಯಾಟ ನಡೆಸಿ ಉತ್ತಮ ಸಾಥ್ ನೀಡಿದರು.

 ಮಜುಂದಾರ್‌ಗೆ ಸಂಪೂರ್ಣ ಸಾಥ್ ನೀಡಿದ ಆಕಾಶ್ ದೀಪ್ ಸಿಡಿಸಿದ ಜೀವನಶ್ರೇಷ್ಠ (44 ರನ್) ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಗಳಿಸಿದ್ದಾರೆ.

ಮಜುಂದಾರ್ ಹಾಗೂ ಆಕಾಶ್ ದೀಪ್ ಎರಡು ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದು 136 ಎಸೆತಗಳಲ್ಲಿ 103 ರನ್ ಸೇರಿಸಿದರು. ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿದ್ದ ನಾಯಕ ಕರುಣ್ ನಾಯರ್ ಅವರು ಜೆ.ಸುಚಿತ್ ಬದಲಿಗೆ ಭಾರತದ ಓಪನರ್ ರಾಹುಲ್‌ಗೆ ಅವಕಾಶ ಕಲ್ಪಿಸಿದರು.

ಎರಡನೇ ಅವಧಿಯಲ್ಲಿ ಈಡನ್‌ಗಾರ್ಡನ್ಸ್ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದ ಕಾರಣ ಕರ್ನಾಟಕದ ಮೂವರು ವೇಗಿಗಳು ದಣಿದಂತೆ ಕಂಡುಬಂದರು. ಮಜುಂದಾರ್ ಸಂಪೂರ್ಣ ಲಾಭ ಪಡೆದರು. ಕರ್ನಾಟಕದ ಬೌಲಿಂಗ್ ಪಾಳಯದಲ್ಲಿದ್ದ ಏಕೈಕ ಸ್ಪಿನ್ನರ್ ಕೆ.ಗೌತಮ್ 26 ಓವರ್‌ಗಳ ಬೌಲಿಂಗ್ ಮಾಡಿದರು.

173 ಎಸೆತಗಳಲ್ಲಿ ಔಟಾಗದೆ 120 ರನ್ ಗಳಿಸಿದ್ದ ಮಜುಂದಾರ್ ನಾಲ್ಕು ಗಂಟೆ, 11 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡರು. ಮಜುಂದಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9ನೇ ಹಾಗೂ ರಣಜಿ ಟ್ರೋಫಿಯಲ್ಲಿ ಏಳನೇ ಶತಕ ಸಿಡಿಸಿದರು. ಕರ್ನಾಟಕ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದ್ದು, ಎರಡು ಕ್ಯಾಚ್ ಕೈಚೆಲ್ಲಿದರು. ವಿಕೆಟ್‌ಕೀಪರ್ ಎಸ್.ಶರತ್ ಹಾಗೂ ನಾಯಕ ನಾಯರ್ ಕ್ಯಾಚ್ ಕೈಚೆಲ್ಲಿದರು. ಇದರಿಂದ ಬಂಗಾಳ ಆರಂಭಿಕ ಕುಸಿತದಿಂದ ಅಮೋಘವಾಗಿ ಚೇತರಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News