ವನಿತೆಯರ ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ ಸತತ ನಾಲ್ಕನೇ ಜಯ

Update: 2020-03-01 05:01 GMT

ಮೆಲ್ಬೋರ್ನ್, ಮಾ.1: ರಾಧಾ ಯಾದವ್ ಜೀವನಶ್ರೇಷ್ಠ ಬೌಲಿಂಗ್(4-23) ಹಾಗೂ ಶೆಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್(47,34 ಎಸೆತ)ಸಹಾಯದಿಂದ ಭಾರತದ ಮಹಿಳಾ ತಂಡ ವನಿತೆಯರ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಸದೆಬಡಿಯಿತು. ಈ ಮೂಲಕ ‘ಎ’ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿತು.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಒಟ್ಟು 8 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಶನಿವಾರ ಇಲ್ಲಿ ನಡೆದ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಚಾಮರಿ ಜಯಾಂಗಿನಿ(33) ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಎಡಗೈ ಸ್ಪಿನ್ನರ್ ರಾಧಾ ಲಂಕಾದ ನಾಯಕಿ ಜಯಾಂಗಿನಿ ಸಹಿತ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಗೆಲ್ಲಲು ಸುಲಭ ಸವಾಲು ಪಡೆದ ಭಾರತ 14.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ಶೆಫಾಲಿ ವರ್ಮಾ ಸರ್ವಾಧಿಕ ಸ್ಕೋರ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಲಾ 15 ರನ್ ಗಳಿಸಿದರು. 16ರ ಹರೆಯದ ಶೆಫಾಲಿ ಎರಡನೇ ಹಾಗೂ ನಾಲ್ಕನೇ ಓವರ್‌ನಲ್ಲಿ ಜೀವದಾನ ಪಡೆದರು. ತನ್ನ 34 ಎಸೆತಗಳ ಇನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. 11ನೇ ಓವರ್‌ನಲ್ಲಿ 47 ರನ್ ಗಳಿಸಿ ಔಟಾಗಿರುವ ಶೆಫಾಲಿ ಟೂರ್ನಮೆಂಟ್‌ನಲ್ಲಿ ಎರಡನೇ ಬಾರಿ ಅರ್ಧಶತಕದಿಂದ ವಂಚಿತರಾದರು. ನ್ಯೂಝಿಲ್ಯಾಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಶೆಫಾಲಿ 46 ರನ್ ಗಳಿಸಿದ್ದರು. ಕೌರ್(15) ಹಾಗೂ ಸ್ಮತಿ ಮಂಧಾನ (17)ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಮಂಧಾನಾ 5ನೇ ಓವರ್‌ನಲ್ಲಿ ಕವಿಶಾ ದಿಲ್‌ಹರಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಜೆಮಿಮಾ ರೋಡ್ರಿಗಸ್(15) ಹಾಗೂ ದೀಪ್ತಿ ಶರ್ಮಾ(15)ಭಾರತವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಮೂರನೇ ಓವರ್‌ನಲ್ಲಿ ಆರಂಭಿಕ ಆಟಗಾರ್ತಿ ಉಮೇಶಾ ಥಿಮಾಶಿನಿ(2) ವಿಕೆಟ್ ಕಳೆದುಕೊಂಡಿತು. ದೀಪ್ತಿ ಶರ್ಮಾ ಎಸೆತದಲ್ಲಿ ರಾಜೇಶ್ವರಿ ಗಾಯಕ್ವಾಡ್‌ಗೆ ಥಿಮಾಶಿನಿ ವಿಕೆಟ್ ಒಪ್ಪಿಸಿದರು. 8ನೇ ಓವರ್‌ನಲ್ಲಿ ಮಾಧವಿ ವಿಕೆಟ್ ಪಡೆಯುವುದರೊಂದಿಗೆ ಮೇಡನ್ ಓವರ್ ಬೌಲಿಂಗ್ ಮಾಡಿದ ಎಡಗೈ ಸ್ಪಿನ್ನರ್ ಗಾಯಕ್ವಾಡ್ ಶ್ರೀಲಂಕಾಕ್ಕೆ ಒತ್ತಡ ಹೇರಿದರು.

 ನಾಯಕಿ ಕೌರ್ 9ನೇ ಓವರ್‌ನಲ್ಲಿ ರಾಧಾ ಕೈಗೆ ಚೆಂಡು ನೀಡಿದರು. ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು ಅವರಿ ರಾಧಾ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ಸ್ವಾಗತಿಸಿದರು. ಮುಂದಿನ ಓವರ್‌ನಲ್ಲಿ ಹನ್ಸಿಮಾ ಕರುಣರತ್ನೆ(7) ಹಾಗೂ ಹಸಿನಿ ಪೆರೇರ(7)ವಿಕೆಟ್ ಉರುಳಿಸಿದರು. ವಿಕೆಟ್‌ಕೀಪರ್ ಅನುಷ್ಕಾ ಸಂಜೀವನಿಗೆ(1)ಪೆವಿಲಿಯನ್ ಹಾದಿ ತೋರಿಸಿದರು. ಪಂದ್ಯದುದ್ದಕ್ಕೂ ಭಾರತದ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಿದ್ದು, ರಾಧಾ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರೆ, ಗಾಯಕ್ವಾಡ್(2-18)ಎರಡು ವಿಕೆಟ್ ಪಡೆದರು. ದೀಪ್ತಿ(1-16), ಶಿಖಾ ಪಾಂಡೆ(1-35) ಹಾಗೂ ಪೂನಂ ಯಾದವ್(1-20)ತಲಾ ಒಂದು ವಿಕೆಟ್ ಪಡೆದರು. ಸ್ಪಿನ್ನರ್ ರಾಧಾ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News