×
Ad

ಸಿಎಎ ದೇಶದ ಒಂದು ವರ್ಗದ ಜನರನ್ನು ಎರಡನೆ ದರ್ಜೆಯ ಪ್ರಜೆಗಳಾಗಿ ವಿಂಗಡಿಸುವ ಹುನ್ನಾರ : ತೀಸ್ತಾ ಸೆಟಲ್ವಾಡ್

Update: 2020-03-01 15:25 IST

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಒಂದು ವರ್ಗದ ಜನರನ್ನು ಎರಡನೆ ದರ್ಜೆಯ ಪ್ರಜೆಗಳಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್ ತಿಳಿಸಿದ್ದಾರೆ.

ನಗರದ ರೋಶನಿ ನಿಲಯದಲ್ಲಿಂದು ನಾಗರಿಕರ ಸಂಘಟನೆ ವತಿಯಿಂದ ಹಮ್ಮಿಕೊಂಡ ಪ್ರಚಲಿತ ಸವಾಲುಗಳ ಬಗ್ಗೆ ಸಂವಾದ ಗೊಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪೌರತ್ವ ನಮಗೆ ದೇಶದಲ್ಲಿ ಉಳಿದ ಅಧಿಕಾರವನ್ನು ಪಡೆಯಲು ಇರುವ ಹಕ್ಕು ಅಥವಾ ಒಂದು ರೀತಿಯ ಅಧಿಕಾರ. ದೇಶದಲ್ಲಿ ಪೌರತ್ವ ನೋಂದಣಿ ನಡೆಸಿ ಸೂಕ್ತ ದಾಖಲೆ ಇಲ್ಲದವರನ್ನು ಪೌರತ್ವದಿಂದ ಹೊರತು ಪಡಿಸಿದಾಗ ಅವರು ಈ ದೇಶದ ಎರಡನೆ ದರ್ಜೆಯ ಪ್ರಜೆಗಳಾಗುತ್ತಾರೆ. ಈ ರೀತಿ ಎರಡನೆ ದರ್ಜೆಯ ಪ್ರಜೆಗಳಾದವರು ದೇಶದ ನಾಗರಿಕರಿಗೆ ದೊರೆಯುವ ಹಕ್ಕುಗಳಿಂದ ವಂಚಿತರಾಗುತ್ತಾರೆ. ಒಂದು ಸರ್ವೆಯ ಪ್ರಕಾರ ದೇಶದ 135 ಕೋಟಿ ಜನಸಂಖ್ಯೆಯಲ್ಲಿ ಶೇ 58 ಜನರಲ್ಲಿ ಮಾತ್ರ ಜನನ ಪ್ರಮಾಣ ಪತ್ರವಿದೆ. ಉಳಿದವರಲ್ಲಿ ಇಲ್ಲ. ದೇಶದಲ್ಲಿರುವ 40 ಕೋಟಿ ಅಸಂಘಟಿತ ವಲಯದಲ್ಲಿ ಕಾರ್ಮಿಕರಿದ್ದಾರೆ. ಈ ಪೈಕಿ ಬಹುತೇಕ ಜನರಲ್ಲಿ ಸಮರ್ಪಕ ದಾಖಲೆಗಳಲ್ಲ. ಆದಿವಾಸಿಗಳಲ್ಲಿ, ಹಲವು ಮಹಿಳೆಯರಲ್ಲಿ, ದಲಿತರಲ್ಲಿ, ಅನಕ್ಷರಸ್ಥರಲ್ಲಿ ದಾಖಲೆಗಳ ಕೊರತೆ ಇದೆ. ಇವುಗಳನ್ನು ಗಮನಿಸಿದಾಗ ಪೌರತ್ವ ತಿದ್ದುಪಡಿಯಿಂದ ದೇಶದಲ್ಲಿ ಎರಡು ವರ್ಗದ ಜನಸಮುದಾಯ ವನ್ನು ನಿರ್ಮಿಸಿ ಒಂದು ವರ್ಗದವರಿಗೆ ಮಾತ್ರ ಸರಕಾರದ ಸೌಲಭ್ಯಗಳನ್ನು ನೀಡುವ ಉದ್ದೇಶ ಈ ಕಾಯ್ದೆ ಜಾರಿ ಮಾಡುವುದರ ಹಿಂದೆ ಅಡಗಿದೆ. ಉಳಿದವರನ್ನು ದೇಶದಲ್ಲಿರುವ ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡಿ ಅವರಿಗೆ ಸರಕಾರದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ತೀಸ್ತಾ ಸೆಟಲ್ವಾಡ್ ತಿಳಿಸಿದರು.

'ಪೌರತ್ವ ತಿದ್ದುಪಡಿಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎನ್ನುವುದು ಅಪಪ್ರಚಾರ'

ಪೌರತ್ವ ತಿದ್ದುಪಡಿ ಸಂವಿಧಾನದ ಮೂಲ ಭೂತ ಹಕ್ಕಿಗೆ ವಿರುದ್ಧವಾಗಿದೆ. ಧರ್ಮ ಆಧಾರಿತವಾದ ಈ ಕಾನೂನು ಸಂವಿಧಾನ 5 ರಿಂದ 11 ವಿಧಿಗಳಿಗೆ ವಿರುದ್ಧವಾಗಿದೆ. ಇದು ದೇಶದ ಸಂವಿಧಾನದಲ್ಲಿ ನಮಗೆ ನೀಡಿರುವ ಸಮಾತೆಯ ಹಕ್ಕು, ಈ ದೇಶದಲ್ಲಿ ಜೀವಿಸುವ ಹಕ್ಕು, ನಮ್ಮ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳಿಗೆ ಮತ್ತು ಪ್ರಜಾ ಪ್ರಭುತ್ವಕ್ಕೆ ಸವಾಲಾಗಿದೆ ಎಂದು ತೀಸ್ತಾ ಸೆಟಲ್ವಾಡ್ ಹೇಳಿದರು.

ದೇಶದಲ್ಲಿರುವ ಆದಿವಾಸಿ ಬುಡಕಟ್ಟು ಜನರು, ಕಾಡಿನಲ್ಲಿ ವಾಸಿಸುತ್ತಿರುವವರು ತಮ್ಮ ಭೂಮಿಯ ಬಗ್ಗೆ ದಾಖಲೆ ಹೊಂದದೆ ಇರುವ ಜನರನ್ನು ವ್ಯವಸ್ಥಿತವಾಗಿ ಹೊರದಬ್ಬಿ ಆ ಭೂಮಿಗಳನ್ನು ದೊಡ್ಡ ಉದ್ಯಮ ಶಾಹಿಗಳ ಕೈಗೆ ನೀಡುವ ಹುನ್ನಾರವಿದೆ ಎಂದು ತೀಸ್ತಾ ತಿಳಿಸಿದರು.

ದೇಶಕ್ಕೆ ದೊಡ್ಡ ಆರ್ಥಿಕ ಹೊರೆ :- ಈ ಪ್ರಕ್ರಿಯೆ ದೇಶಕ್ಕೆ ಅತ್ಯಂತ ದೊಡ್ಡ ಆರ್ಥಿಕ ಹೊರೆಯನ್ನು ಉಂಟು ಮಾಡಬಹುದು. ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗಾಗಿ ಸುಮಾರು 55,000 ಕೋಟಿ ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಒಂದು ದೊಡ್ಡ ಮೊತ್ತವನ್ನು ಈ ರೀತಿಯಾಗಿ ವೆಚ್ಚ ಮಾಡಿದರೆ ದೇಶದ ಅಭಿವೃದ್ಧಿ ಕುಂಠಿತವಾಗಬಹುದು ಎಂದರು.

ಸಮಾರಂಭದಲ್ಲಿ ಸಂಘಟಕರದ ವಿದ್ಯಾ ದಿನಕರ್ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News