ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ: ತೀಸ್ತಾ ಸೆಟಲ್ವಾಡ್
ಮಂಗಳೂರು, ಮಾ.1: ದೇಶದ ಸಂವಿಧಾನದ ಆಶಯಗಳ ಸಂರಕ್ಷಣೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್ ತಿಳಿಸಿದ್ದಾರೆ.
ಸಂವಿಧಾನದ ಸಂರಕ್ಷಣಾ ಸಮಿತಿ, ಮದನಿನಗರ ಮುನ್ನೂರು ಇದರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಸ್ಸಾಂ ನಲ್ಲಿ ಎನ್ ಆರ್ ಸಿ ಜಾರಿಗೆ ಬಂದ ನಂತರ ಲಕ್ಷಾಂತರ ಮಂದಿ ತಮ್ಮಲ್ಲಿ ದಾಖಲೆಗಳಿಲ್ಲದೆ ಇದ್ದ ಕಾರಣ ಈ ದೇಶವಾಸಿಗಳಾಗಿದ್ದರೂ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಅಸ್ಸಾಂನಲ್ಲಿ ಜಿಡಿಪಿ ಕುಸಿತವಾಗಿದೆ. ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆಲ್ಲಾ ದೋಷ ಪೂರಿತ ಎನ್ಆರ್ ಸಿ ಕಾರಣ. ಈ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ಅಪಾಯ ತಂದೊಡ್ಡುವ ದೇಶದ ಜಾತ್ಯತೀತ ಧೋರಣೆಗೆ ವಿರುದ್ಧ ವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ತೀಸ್ತಾ ಸೆಟಲ್ವಾಡ್ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಂತಕ ಶಿವ ಸುಂದರ್ ಮಾತನಾಡುತ್ತಾ, ಮತದಾನದ ಮೂಲಕ ದೇಶದ ಪ್ರಧಾನಿಯನ್ನು ಆಯ್ಕೆ ಮಾಡಿದ ಪ್ರಜೆಗಳನ್ನು ಅನುಮಾನಾಸ್ಪದವಾಗಿ ನೋಡುವಂತೆ ಮಾಡುವ ಕಾನೂನು ಪೌರತ್ವ ತಿದ್ದುಪಡಿ ಕಾಯ್ದೆಯಾಗಿದೆ. ದೇಶದ 135 ಕೋಟಿ ಜನರ ಮೇಲೆ ಕೆಟ್ಟ ಪರಿಣಾಮ ಬೀರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಸಂವಿಧಾನದ ರಕ್ಷಣೆಗೆ ಎನ್ ಪಿ ಆರ್ ರದ್ದು ಮಾಡಬೇಕು ಎಂದು ಶಿವಸುಂದರ್ ಹೇಳಿದರು.
ಚಿಂತಕ ಮಹೇಂದ್ರ ಕುಮಾರ್ ಮಾತನಾಡುತ್ತಾ, ದೆಹಲಿಯಲ್ಲಿ ಸರಕಾರಿ ಪ್ರಾಯೋಜಿತ ದಂಗೆ ನಡೆಯುತ್ತಿದೆ. ಈ ದಂಗೆಗೆ 48 ಜನರು ಬಲಿಯಾಗಿದ್ದಾರೆ. ಕಾರ್ಯಾಂಗ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು. ಸಮಾಜ ದಲ್ಲಿ ಸಾಮರಸ್ಯಕ್ಕೆ ಹಿಂದುತ್ವದ ಹೆಸರಿನಲ್ಲಿ ಹಿಂದುಳಿದ ವರ್ಗದ, ಬಿಲ್ಲವ, ದಲಿತ ಯುವಕರನ್ನು ಮುಂದಿಟ್ಟು ಅವರು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿರುವ ನಾಯಕತ್ವದ ವಿರುದ್ಧ ಮಾತನಾಡುತ್ತಿದ್ದೇನೆ. ದಲಿತರು, ಶೂದ್ರರು, ಮುಸಲ್ಮಾನರ ನಡುವೆ ಜಗಳ ಹುಟ್ಟಿಸಿ ತಾವು ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವವರ ವಿರುದ್ಧ ಮಾತನಾಡುತ್ತಿದ್ದೇನೆ. ಅಂಬೇಡ್ಕರ್ ಸಂವಿಧಾನದ ರಕ್ಷಣೆಗೆ ನಾವು ಗಾಂಧಿ ಮಾರ್ಗದಲ್ಲಿ ಸಾಗಬೇಕಾಗಿದೆ ಆದರೆ ಯಾವೂದೇ ಕಾರಣಕ್ಕೂ ಇದರಿಂದ ಸರಿಯಬಾರದು ಎಂದು ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಶಾಸಕ ಯು.ಟಿ.ಖಾದರ್, ಉಡುಪಿ ಖಾಜಿ ಅಲ್ ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ , ಧರ್ಮಗುರು ವಂ.ಎಲ್ಯಾಸ್ ಡಿ.ಸೋಜ, ಮದನಿ ನಗರ ಜುಮಾ ಮಸೀದಿ ಖತೀಬ್ ಮುದ್ರಿಖ ಮದನಿ, ಬಬ್ಬು ಕಟ್ಟೆ ಚರ್ಚ್ ಧರ್ಮ ಗುರು ವಂ.ಪ್ರಭುರಾಜ್, ಹಿರಿಯ ಪತ್ರಕರ್ತ ಜಿ.ರಾಜಶೇಖರ, ಎಸ್ ಡಿ ಪಿಐ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್, ಸಿಪಿಐಎಂ ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್, ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ,ಎಸ್ಕೆಎಸ್ಸೆಸ್ಸೆಫ್ ಸಂಘಟಕ ಇಬ್ರಾಹಿಂ ಬಾತಿಶ ಎಸ್ ಕೊಡ್ಲಿಪೇಟೆ, ಎಸ್ಸೆಸ್ಸೆಫ್ ಸಂಘಟಕ ಹಾಫಿಝ್ ಸೂಫಿಯಾನ್ ಸಖಾಫಿ ಕಾವಲಕಟ್ಟೆ, ಪತ್ರಕರ್ತ ಅಬ್ದುಲ್ ಖಾದರ್ ಕುಕ್ಕಿಲ, ಎಸ್ ಕೆ ಎಸ್ ಎಂ ಜಿಲ್ಲಾಧ್ಯಕ್ಷ ಎಂ.ಜಿ. ಮುಹಮ್ಮದ್, ಕೇಂದ್ರ ಜುಮಾ ಮಸೀದಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.
ಕಣಚೂರು ಸಮೂಹ ಸಂಸ್ಥೆ ಗಳ ಅಧ್ಯಕ್ಷ ಹಾಜಿ.ಯು. ಕೆ.ಮೋನು, ನಿವೃತ್ತ ಸೇನಾನಿ ಕೃಷ್ಣಗಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಮಾಜಿ ಮೇಯರ್ ಅಶ್ರಫ್, ಪಿ.ವಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಸಂವಿಧಾನದ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮುಸ್ತಫಾ ಮುನ್ನೂರು ವಂದಿಸಿದರು. ನೌಫಾಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.