ಸಂಘಟಿತ ಹೋರಾಟದಿಂದ ಬೇಡಿಕೆ ಈಡೇರಿಸಲು ಸಾಧ್ಯ: ಕಲ್ಲಾಗರ್
ಬ್ರಹ್ಮಾವರ, ಮಾ.1: ರಿಕ್ಷಾ ಚಾಲಕರು ದಿನಕ್ಕೆ 18ಗಂಟೆ ದುಡಿಯುತ್ತಿದ್ದರೂ ಅವರ ಕುಟುಂಬ ನಿರ್ವಹಣೆ ಕಷ್ಟದಾಯಕವಾಗಿದೆ. ಸರಕಾರ ಅವರಿಗೆ ಕಲ್ಯಾಣ ಮಂಡಳಿಗೆ ಹಣಕಾಸು ಒದಗಿಸದೆ ಅಂತಹ ಶ್ರಮಿಕರ ಮೇಲೆಯೇ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಜಾರಿ ಮಾಡಿ ದಂಡ, ಜೈಲುವಾಸದ ಕಾನೂನು ತರುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದ್ದಾರೆ.
ಬ್ರಹ್ಮಾವರದ ನಾರಾಯಣಗುರು ಮಂದಿರದಲ್ಲಿ ಶನಿವಾರ ನಡೆದ ಉಡುಪಿ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ 34ನೆ ವಾರ್ಷಿಕ ಮಹಾಸಭೆ ಯಲ್ಲಿ ಅವರು ಮಾತನಾಡುತಿದ್ದರು.
ದೇಶದ ರಸ್ತೆ ಸಾರಿಗೆ ಉದ್ದಿಮೆಯ ಪ್ರಮುಖ ಭಾಗದಲ್ಲಿ ಶೇ.90ರಷ್ಟಿ ಕಾರ್ಮಿಕರು ಖಾಸಗಿ ವಲಯದಲ್ಲಿ ದುಡಿಯುತ್ತಿದ್ದಾರೆ. ಈ ಕ್ಷೇತ್ರದ ಕಾರ್ಮಿಕ ರಿಗೆ ಸರಕಾರವು ಅವರ ಕುಟುಂಬಗಳ ರಕ್ಷಣೆಗೆ ಭವಿಷ್ಯ ನಿಧಿ, ವೈದ್ಯಕೀಯ ಸವಲತ್ತುಗಳು, ಪೆನ್ಶನ್, ಮಕ್ಕಳ ವಿದ್ಯಭ್ಯಾಸಕ್ಕೆ ನೆರವು ಮುಂತಾದ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಒದಗಿಸುವ ಕಾನೂನು ಜಾರಿ ಮಾಡುತ್ತಿಲ್ಲ ಎಂದರು.
ದೇಶದಾದ್ಯಂತ ಸಾರಿಗೆ ಕ್ಷೇತ್ರದಲ್ಲಿ ಕೋಟ್ಯಾಂತರ ಕಾರ್ಮಿಕರಿದ್ದಾರೆ. ಅವರ ಹೋರಾಟದಲ್ಲಿ ಒಗ್ಗಟ್ಟಿನ ಕೊರತೆಯಿಂದ ಸರಕಾರಗಳನ್ನು ಮಣಿಸಿ ಬೇಡಿಕೆ ಈಡೇರಿಸಿಕೊಳ್ಳಲು ವಿಫಲರಾಗಿದ್ದಾರೆ. ರಾಜಕೀಯ ಪಕ್ಷದ ಆಡಳಿತ ನೀತಿ ಗಳನ್ನು ಸೋಲಿಸ ಬೇಕೆಂಬ ಸಂಘಟನಾತ್ಮಕ ತಿಳುವಳಿಕೆ ಕೊರತೆಯಿಂದ ತಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕಾರ್ಮಿಕರ ಹಿತಕ್ಕಾಗಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಮಾತನಾಡಿದರು. ಉಡುಪಿ ತಾಲೂಕು ಸಂಘದ ಅಧ್ಯಕ್ಷ ರಾಜು ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ಸ್ಥಳೀಯ ಕಾರ್ಮಿಕ ಮುಖಂಡರಾದ ಗೊಡ್ವೀನ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸದಾಶಿವ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಮರಕಾಲ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಶಂಕರ ಮರಕಾಲ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಹೊಸ ಸಮಿತಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ರಾಜು ಪೂಜಾರಿ ಹಂದಾಡಿ, ಅಧ್ಯಕ್ಷರಾಗಿ ರಾಜು ಸಾಲಿಯನ್, ಉಪಾಧ್ಯಕ್ಷರುಗಳಾಗಿ ಸದಾಶಿವ ಪೂಜಾರಿ, ವಾಸು ಪೂಜಾರಿ ಬಾರಕೂರು, ಭಾಸ್ಕರ ಉಪ್ಪೂರು, ಸೂರ್ಯ ಚಾಂತಾರು, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಭಾಕರ ಪೂಜಾರಿ ಸಹ ಕಾರ್ಯದರ್ಶಿಯಾಗಿ ರತ್ನಾಕರ ಮರಕಾಲ, ದೇವಿಪ್ರಸಾದ್, ಗೌರವ ಸಲಹೆಗಾರರಾಗಿ ಉದಯ ಕುಮಾರ್ ಹೇರೂರು, ಸುಧಾಕರ ದೇವಾಡಿಗ, ಆನಂದ ಅವರನ್ನು ಆಯ್ಕೆ ಮಾಡಲಾಯಿತು.