×
Ad

ಅರ್ಹರಿಗೆ ಸೌಲಭ್ಯದ ಪ್ರಯೋಜನ ತಲುಪಲಿ : ಶಾಸಕ ಕಾಮತ್

Update: 2020-03-01 21:27 IST

ಮಂಗಳೂರು, ಮಾ.1: ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಮಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳು ಅರ್ಹರಿಗೆ ತಲುಪ ಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಆಶ್ರಯದಲ್ಲಿ ರವಿವಾರ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಹಾಗೂ ಕಾರ್ಮಿಕ ಸಮ್ಮಾನ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆಯಿಂದ ಅನೇಕ ಸೌಲಭ್ಯಗಳು ದೊರೆಯುತ್ತಿವೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಮಕ್ಕಳಿಗೆ ಒಂದನೇ ತರಗತಿಯಿಂದ ಪಿಎಚ್‌ಡಿವರೆಗೆ ಕಲಿಯುವ ಅವಕಾಶವಿದೆ. ಲೈಸೆನ್ಸ್ ಹಾಗೂ ಬ್ಯಾಡ್ಜ್ ಹೊಂದಿದ ಚಾಲಕರು ಅಕಸ್ಮಾತ್ ಅಪಘಾತದಲ್ಲಿ ಮೃತಪಟ್ಟರೆ ಅವರ ನಾಮಿನಿಗೆ ಐದು ಲಕ್ಷದವರೆಗೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ನೂತನ ಮೇಯರ್ ದಿವಾಕರ್ ಪಾಂಡೇಶ್ವರ ಮಾತನಾಡಿ, ಜಿಲ್ಲೆಯ ಅಸಂಘಟಿತ ವಲಯದಲ್ಲಿ ಸುಮಾರು 25 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಕೇವಲ 6 ಸಾವಿರ ಮಂದಿ ಕಾರ್ಮಿಕರ ನೋಂದಣಿ ಮಾತ್ರ ನಡೆದಿದೆ. ಹೆಚ್ಚಿನ ಕಾರ್ಮಿಕರಿಗೆ ಇನ್ನೂ ಇದರ ಕುರಿತು ಸರಿಯಾದ ಮಾಹಿತಿ ಇಲ್ಲ. ಕಾರ್ಮಿಕ ನೋಂದಣಿ ಆನ್‌ಲೈನ್‌ನಲ್ಲಿ ಮಾಡಬೇಕಾಗಿರುವುದರಿಂದ ಕಾರ್ಮಿಕ ಇಲಾಖೆಯು ಶಾಸಕರ ಕಚೇರಿ ಹಾಗೂ ಮಂಗಳೂರು ಮಹಾನಗರಪಾಲಿಕೆ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡ ಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್, ದೇಶದಲ್ಲಿ ಶೇ.88ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಆರು ಸಾವಿರ ಅಸಂಘಟಿತ ಕಾರ್ಮಿಕರಿಗೆ ಚಿಪ್ ಹೊಂದಿದ ಗುರುತು ಕಾರ್ಡ್ ಹಂಚಲಾಗಿದೆ ಎಂದು ಹೇಳಿದರು.

ಸನ್ಮಾನ: ವಿವಿಧ ಕ್ಷೇತ್ರಗಳ 12 ಮಂದಿ ಸಾಧಕರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ವಿಜೇತರಿಗೆ ಚಿನ್ನದ ಪದಕ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ನೀಡಲಾಯಿತು. 92 ಮಂದಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್, ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸದಸ್ಯ ಪ್ರವೀಣ್ ಸಾಲ್ಯಾನ್, ಜಿಲ್ಲಾ ಅಕ್ಕ ಸಾಲಿಗರ ಸಂಘದ ಅಧ್ಯಕ್ಷ ಕೆ.ಎಲ್. ಹರಿಪ್ರಸಾದ್, ಜಿಲ್ಲಾ ಕ್ಷೌರಿಕರ ಸಂಘದ ಅಧ್ಯಕ್ಷ ಆನಂದ ಭಂಡಾರಿ, ಜಿಲ್ಲಾ ಕುಲಾಲರ ಸಂಘದ ಅಧ್ಯಕ್ಷ ಕೃಷ್ಣ ಕುಲಾಲ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಭಾಸ್ಕರ ಮಡಿವಾಳ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News