5,000 ತಾಲಿಬಾನ್ ಕೈದಿಗಳ ಬಿಡುಗಡೆ ಸಾಧ್ಯವಿಲ್ಲ: ಅಶ್ರಫ್ ಘನಿ

Update: 2020-03-01 17:53 GMT

ಕಾಬೂಲ್ (ಅಫ್ಘಾನಿಸ್ತಾನ), ಮಾ. 1: ಅಫ್ಘಾನ್ ಸರಕಾರದೊಡನೆ ಮಾತುಕತೆ ನಡೆಸಬೇಕಾದರೆ 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬ ತಾಲಿಬಾನಿಗಳ ಶರತ್ತನ್ನು ಈಡೇರಿಸಲು ದೇಶದ ಅಧ್ಯಕ್ಷ ಅಶ್ರಫ್ ಘನಿ ನಿರಾಕರಿಸಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್ ನಡುವೆ ಶನಿವಾರ ಏರ್ಪಟ್ಟಿರುವ ಶಾಂತಿ ಒಪ್ಪಂದದಲ್ಲಿ ಈ ಬೇಡಿಕೆಯಿದೆ.

ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ನಡುವೆ ಮಾತುಕತೆ ಏರ್ಪಡಿಸಲು ಅಮೆರಿಕನ್ ಸಂಧಾನಕಾರರು ಪಡುತ್ತಿರುವ ಪರಿಶ್ರಮದ ನಡುವೆಯೇ ಅಫ್ಘಾನ್ ಅಧ್ಯಕ್ಷರ ಈ ಹೇಳೀಕೆ ಹೊರಬಿದ್ದಿದೆ.

‘‘5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವ ಭರವಸೆಯನ್ನು ಅಫ್ಘಾನಿಸ್ತಾನ ಸರಕಾರ ನೀಡಿಲ್ಲ’’ ಎಂದು ಶಾಂತಿ ಒಪ್ಪಂದಕ್ಕೆ ಕತರ್‌ನಲ್ಲಿ ಸಹಿ ಬಿದ್ದ ಒಂದು ದಿನದ ಬಳಿಕ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಘನಿ ಹೇಳಿದರು.

ಕೈದಿಗಳ ವಿನಿಮಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಘನಿ, ‘‘ಇದನ್ನು ನಿರ್ಧರಿಸುವ ಅಧಿಕಾರ ವ್ಯಾಪ್ತಿಯನ್ನು ಅಮೆರಿಕ ಹೊಂದಿಲ್ಲ, ಅವರು ಸಂಧಾನ ಏರ್ಪಡಿಸುವವರು ಮಾತ್ರ’’ ಎಂದರು.

ಅಮೆರಿಕದ ವಿಶೇಷ ರಾಯಭಾರಿ ಝಲ್ಮಾಯ್ ಖಲೀಲ್‌ ಝಾದ್ ಮತ್ತು ತಾಲಿಬಾನ್‌ನ ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಕತರ್ ರಾಜಧಾನಿ ದೋಹಾದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಒಪ್ಪಂದದ ಪ್ರಕಾರ, ಅಮೆರಿಕವು ಅಫ್ಘಾನಿಸ್ತಾನದಲ್ಲಿರುವ ಎನ್ನ ಎಲ್ಲ ಸೈನಿಕರನ್ನು 14 ತಿಂಗಳೊಳಗೆ ವಾಪಸ್ ಕರೆಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News