ಮಲೇಶ್ಯದ ನೂತನ ಪ್ರಧಾನಿಯಾಗಿ ಮುಹ್ಯುದ್ದೀನ್ ಯಾಸಿನ್ ಪ್ರಮಾಣ
Update: 2020-03-01 23:43 IST
ಕೌಲಾಲಂಪುರ (ಮಲೇಶ್ಯ), ಮಾ. 1: ಮಲೇಶ್ಯದ ಮಾಜಿ ಗೃಹ ಸಚಿವ ಮುಹ್ಯುದ್ದೀನ್ ಯಾಸಿನ್ ರವಿವಾರ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಧಾನಿ ಕೌಲಾಲಂಪುರದಲ್ಲಿರುವ ನ್ಯಾಶನಲ್ ಪ್ಯಾಲೇಸ್ ನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಮಣವಚನ ಸ್ವೀಕರಿಸಿದರು. ಈ ಹಿಂದಿನ ಸಮ್ಮಿಶ್ರ ಸರಕಾರವು ಕುಸಿದ ಬಳಿಕ ಹಾಗೂ ಪ್ರಧಾನಿ ಮಹಾತಿರ್ ಮುಹಮ್ಮದ್ ರಾಜೀನಾಮೆ ನೀಡಿದ ಬಳಿಕ ದೇಶದಲ್ಲಿ ಒಂದು ವಾರ ಕಾಲ ನೆಲೆಸಿದ್ದ ರಾಜಕೀಯ ಅಸ್ಥಿರತೆಯು ಇದರೊಂದಿಗೆ ಕೊನೆಗೊಂಡಿದೆ.
94 ವರ್ಷದ ಮಹಾತಿರ್ ರ ಸುಧಾರಣಾವಾದಿ ಸಮ್ಮಿಶ್ರ ಸರಕಾರವು ಕಳೆದ ವಾರ ಕುಸಿದ ಬಳಿಕ ದೇಶದಲ್ಲಿ ರಾಜಕೀಯ ಅಸ್ಥಿರತೆ ನೆಲೆಸಿತ್ತು. 2018ರಲ್ಲಿ ನಡೆದ ಚುನಾವಣೆಯಲ್ಲಿ, ಆಡಳಿತಾರೂಢ ಪಕ್ಷದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮಹಾತಿರ್ ಮುಹಮ್ಮದ್‌ರ ಮಿತ್ರಕೂಟವು ಐತಿಹಾಸಿಕ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈಗ ಮತ್ತೆ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವವರು ಅಧಿಕಾರಕ್ಕೆ ಮರಳಿದ್ದಾರೆ.