ಸಂತ ಅಲೋಶಿಯಸ್ ಶಾಲಾ ವಿದ್ಯಾರ್ಥಿಗಳಿಗೆ ಇಕೋ ಫ್ರೆಂಡ್ ಪ್ರಶಸ್ತಿ
ಮಂಗಳೂರು, ಮಾ.2: ಪೆನ್ನಿನಿಂದ ಪರಿಸರ ರಕ್ಷಣೆಗೆ ಮುಂದಾದ ಸಂತ ಅಲೋಶಿಯಸ್ ಕಾಲೇಜಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇಕೋ ಫ್ರೆಂಡ್ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಈ ಶಾಲೆಯಲ್ಲಿ ಪರಿಸರ ಮಾಲಿನ್ಯವನ್ನು ತಡೆಯಲು ತಾವು ಬರೆಯುವ ಪೆನ್ನುಗಳು ಭೂಮಿಗೆ ಸೇರದಂತೆ ಶ್ರಮಿಸಿದ 21 ಪರಿಸರ ಪ್ರೇಮಿ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ ಫಿಲೋಮಿನಾ ಲೂವಿಸ್ ಸನ್ಮಾನಿಸಿದರು.
ಬಳಿಕ ಮಾತನಾಡಿದ ಲೂವಿಸ್ ‘ಇಡಲು, ಬಿಡಲು, ಸುಡಲು ಆಗದ ವಸ್ತುವಾದ ಪ್ಲಾಸ್ಟಿಕನ್ನು ಶಾಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರಿಸರ ಮಾಲಿನ್ಯಕ್ಕೆ ವಿದ್ಯಾರ್ಥಿಗಳು ಉಪಯೋಗಿಸುವ ಪೆನ್ನುಗಳು ಕೂಡ ಕಾರಣವಾಗಿದೆ ಎಂಬ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಗಿದೆ. ಮರುಬಳಕೆಗೆ ಯೋಗ್ಯವಲ್ಲದ ಮತ್ತು ಬೇಡವಾದ ಪೆನ್ನುಗಳನ್ನು ಶಾಲಾ ಶಿಕ್ಷಕ ಲೀಯೋ ಡಿಸೋಜರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸುತ್ತಿದ್ದಾರೆ. ಪೆನ್ನಿನ ಬಳಕೆಯ ಬಳಿಕ ಅದನ್ನು ಎಸೆಯದೆ ಸಂಗ್ರಹಿಸುತ್ತಿದ್ದಾರೆ. ಈ ಪೆನ್ನುಗಳು ಭೂಮಿಗೆ ಸೇರುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿದ್ದು, ಈ ಯೋಜನೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ಶಾಲೆಯಲ್ಲಿ ಇಂತಹ ಅಭ್ಯಾಸಗಳನ್ನು ಬೆಳೆಸುವುದರಿಂದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಮೂಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದು ಪರಿಸರ ರಕ್ಷಣೆಗೆ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.