ಶೀತದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್: ಹಲವು ಆಧ್ಯಾತ್ಮಿಕ ಕಾರ್ಯಗಳಿಗೆ ಗೈರು

Update: 2020-03-02 15:42 GMT

ವ್ಯಾಟಿಕನ್ (ಇಟಲಿ), ಮಾ. 2: “ನಾನು ಶೀತದಿಂದ ಬಳಲುತ್ತಿದ್ದೇನೆ” ಎಂಬುದಾಗಿ ಪೋಪ್ ಫ್ರಾನ್ಸಿಸ್ ರವಿವಾರ ಘೋಷಿಸಿದ್ದಾರೆ. ಹಾಗಾಗಿ, ವ್ಯಾಟಿಕನ್‌ನ ಹಿರಿಯ ಅಧಿಕಾರಿಗಳೊಂದಿಗೆ ರೋಮ್ ಸಮೀಪ ನಡೆಯಬೇಕಾಗಿದ್ದ ಆಧ್ಯಾತ್ಮಿಕ ಸಭೆಯೊಂದರಿಂದ ಅವರು ಹೊರಗುಳಿದಿದ್ದಾರೆ. ಈ ರೀತಿ ಆಗಿರುವುದು ಅವರ ಪೋಪ್ ಉಸ್ತುವಾರಿ ಅವಧಿಯಲ್ಲಿ ಇದೇ ಮೊದಲ ಬಾರಿಯಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ 50 ಶೇಕಡ ಹೆಚ್ಚಳವಾಗಿದೆ ಎಂಬುದಾಗಿ ಇಟಲಿ ಘೋಷಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ದೇಶದಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 1,694ನ್ನು ತಲುಪಿದೆ ಎಂಬುದಾಗಿ ಇಟಲಿಯ ನಾಗರಿಕ ರಕ್ಷಣಾ ಪ್ರಾಧಿಕಾರ ಶನಿವಾರ ಪ್ರಕಟಿಸಿತ್ತು. ಇದಕ್ಕೂ ಒಂದು ದಿನ ಮುಂಚೆ, ದೇಶದ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 1,128 ಎಂಬುದಾಗಿ ಅದು ಘೋಷಿಸಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ.

ಇಟಲಿಯಲ್ಲಿ ಈವರೆಗೆ ಕೊರೋನವೈರಸ್‌ನಿಂದಾಗಿ 34 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಏಶ್ಯದ ಹೊರಗಿನ ಅತಿ ಹೆಚ್ಚು ಕೊರೋನವೈರಸ್ ಸಾವುಗಳು ಸಂಭವಿಸಿವೆ.

ರವಿವಾರ, ತಾನು ಶೀತದಿಂದ ಬಳಲುತ್ತಿದ್ದೇನೆ ಎಂಬುದಾಗಿ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಚೌಕದಲ್ಲಿ 83 ವರ್ಷದ ಪೋಪ್ ಘೋಷಿಸಿದ ಸಂದರ್ಭದಲ್ಲಿ ಅವರು ಹಲವಾರು ಬಾರಿ ಸೀನಿರುವುದು ಗಮನಕ್ಕೆ ಬಂದಿದೆ.

‘‘ದುರದೃಷ್ಟವಶಾತ್, ಶೀತದಿಂದಾಗಿ ಈ ವರ್ಷದ ಈ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ’’ ಎಂದು ಅವರು ಪ್ರಕಟಿಸಿದರು. ‘‘ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರೊಂದಿಗೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವವರೊಂದಿಗೆ ನಾನು ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸುತ್ತೇನೆ. ನಾನು ಮನೆಯಿಂದಲೇ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸುತ್ತೇನೆ’’ ಎಂದು ಅವರು ಹೇಳಿದರು.

ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿರುವುದು ಮೊದಲ ಬಾರಿ

ಗುರುವಾರ ಮತ್ತು ಶನಿವಾರಗಳ ನಡುವೆ ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಪೋಪ್ ತಪ್ಪಿಸಿಕೊಂಡ ಬಳಿಕ, ಅವರು ಶೀತದಿಂದ ಬಳಲುತ್ತಿದ್ದಾರೆ ಎಂಬ ಘೋಷಣೆಯನ್ನು ಮಾಡಲಾಗಿದೆ. ತನ್ನ ಏಳು ವರ್ಷಗಳ ಅವಧಿಯ ಪೋಪ್ ಉಸ್ತುವಾರಿಯಲ್ಲಿ ನಿಗದಿತ ಕಾರ್ಯಕ್ರಮಗಳನ್ನು ಅವರು ತಪ್ಪಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ‘ದಿ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News