×
Ad

ಅತಿ ಶ್ರೀಮಂತರ ಸಂಪತ್ತಿಗೆ ಕನ್ನ ಹಾಕಿದ ಕೊರೋನವೈರಸ್!: 33 ಲಕ್ಷ ಕೋಟಿ ರೂ. ಖೋತಾ

Update: 2020-03-02 21:29 IST

ನ್ಯೂಯಾರ್ಕ್, ಮಾ. 2: ಜಗತ್ತಿನಾದ್ಯಂತ ಹರಡುತ್ತಿರುವ ನೋವೆಲ್-ಕೊರೋನವೈರಸ್ ಭೀತಿಯಿಂದಾಗಿ ಕಳೆದ ವಾರ ಜಗತ್ತಿನ 500 ಅತಿ ಶ್ರೀಮಂತರು 444 ಬಿಲಿಯ ಡಾಲರ್ (ಸುಮಾರು 32.32 ಲಕ್ಷ ಕೋಟಿ ರೂಪಾಯಿ) ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಮಾರಕ ವೈರಸ್‌ನ ಭೀತಿಯಿಂದಾಗಿ ಜಗತ್ತಿನಾದ್ಯಂತದ ಈಕ್ಟಿಟಿ ಮಾರುಕಟ್ಟೆಗಳಲ್ಲಿ ತಲ್ಲಣ ಕಾಣಿಸಿಕೊಂಡಿರುವುದೇ ಈ ಕುಸಿತಕ್ಕೆ ಕಾರಣವಾಗಿದೆ.

ಡೋ ಜೋನ್ಸ್ ಇಂಡಸ್ಟ್ರಿಯಲ್ ಏವರೇಜ್ 12 ಶೇಕಡಕ್ಕಿಂತಲೂ ಅಧಿಕ ಕುಸಿದಿದೆ. ಇದು 2008ರ ಹಣಕಾಸು ಹಿಂಜರಿತದ ಬಳಿಕ, ಅತಿ ದೊಡ್ಡ 5 ದಿನಗಳ ಕುಸಿತವಾಗಿದೆ. ಇದರಿಂದಾಗಿ ಜಾಗತಿಕ ಶೇರು ಮಾರುಕಟ್ಟೆಗಳ 6 ಟ್ರಿಲಿಯ ಡಾಲರ್ (ಸುಮಾರು 436 ಲಕ್ಷ ಕೋಟಿ ರೂಪಾಯಿ)ಗೂ ಅಧಿಕದಷ್ಟು ಮೌಲ್ಯದ ಸಂಪತ್ತು ನಾಶವಾಗಿದೆ.

ಜಗತ್ತಿನ 500 ಅತಿ ಶ್ರೀಮಂತರು ವರ್ಷದ ಆರಂಭದಿಂದ ಕಲೆಹಾಕಿದ್ದ 78 ಬಿಲಿಯ ಡಾಲರ್ (ಸುಮಾರು 5.67 ಲಕ್ಷ ಕೋಟಿ ರೂಪಾಯಿ) ಸಂಪತ್ತು ಕಳೆದ ವಾರವೊಂದರಲ್ಲೇ ಮಾಯವಾಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್ ತಿಳಿಸಿದೆ.

ಜಗತ್ತಿನ ಮೂವರು ಅತಿ ಶ್ರೀಮಂತರಾದ ಅಮೆಝಾನ್.ಕಾಮ್ ನ  ಜೆಫ್ ಬೆಝೊಸ್, ಮೈಕ್ರೋಸಾಫ್ಟ್ ಕಾರ್ಪ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಎಲ್‌ವಿಎಂಎಚ್ ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಒಂದು ವಾರದಲ್ಲಿ ಅತಿ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ. ಅವರ ಮೂವರೂ ಜೊತೆಯಾಗಿ 30 ಬಿಲಿಯ ಡಾಲರ್ (ಸುಮಾರು 2.18 ಲಕ್ಷ ಕೋಟಿ ರೂಪಾಯಿ) ಸಂಪತ್ತು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News