×
Ad

ಮಂಗಳೂರು: ಮಾ.3ರಂದು ರೈಲು ಸಂಚಾರದಲ್ಲಿ ವ್ಯತ್ಯಯ

Update: 2020-03-02 21:43 IST

ಮಂಗಳೂರು, ಮಾ. 2: ಮಂಗಳೂರು ಜಂಕ್ಷನ್ ಮತ್ತು ಪಣಂಬೂರು ರೈಲು ನಿಲ್ದಾಣಗಳ ನಡುವೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಮಾ.3ರಂದು ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗಾಗಿ ಮಂಗಳೂರನ್ನು ಸಂಪರ್ಕಿಸುವ ಹಲವು ರೈಲುಗಳ ಸಂಚಾರ ರದ್ದುಗೊಳ್ಳಲಿವೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ಕಡೆಗೆ ಸಂಚರಿಸುವ ರೈಲು ನಂ. 56647 ಪ್ಯಾಸೆಂಜರ್ ರೈಲು ಹಾಗೂ ಸುಬ್ರಹ್ಮಣ್ಯದಿಂದ ಮಂಗಳೂರು ಸೆಂಟ್ರಲ್‌ಗೆ ತೆರಳುವ ರೈಲು ನಂ.56646 ಪ್ಯಾಸೆಂಜರ್ ರೈಲು ಸಂಚಾರ ಮಾ.3ರಂದು ರದ್ದುಗೊಂಡಿದೆ.

ಮಂಗಳೂರು ಸೆಂಟ್ರಲ್‌ನಿಂದ ಕಬಕ ಪುತ್ತೂರಿಗೆ ತೆರಳುವ ರೈಲು ನಂ. 56645 ಪ್ಯಾಸೆಂಜರ್ ರೈಲು ಹಾಗೂ ಕಬಕ ಪುತ್ತೂರಿನಿಂದ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಸಂಚರಿಸುವ ರೈಲು ನಂ. 56644 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಮಾ.3ರಂದು ರದ್ದುಗೊಳಿಸಲಾಗಿದೆ.

ರೈಲು ಸಂಚಾರ ವಿಳಂಬ: ಮಂಗಳೂರಿನಿಂದ ತೆರಳುವ ಹಾಗೂ ಮಂಗಳೂರು ಸಂಪರ್ಕಿಸುವ ನಾಲ್ಕು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚಾರ ಆರಂಭಿಸಲಿವೆ. ಕೊಂಕಣ್ ರೈಲ್ವೆ ವಿಭಾಗದ ಗಾಂಧಿಧಾಮ- ತಿರುನೆಲ್ವೆಲಿ ಎಕ್ಸ್‌ಪ್ರೆಸ್ (19424) ರೈಲು ಮಾ.3ರಂದು ಒಂದು ಗಂಟೆ ವಿಳಂಬವಾಗಿ ಸಂಚರಿಸಲಿದೆ.

ಕಾರವಾರ- ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಬೆಂಗಳೂರು ಎಕ್ಸ್‌ಪ್ರೆಸ್ (16514) ರೈಲು ಅದೇ ದಿನ 40 ನಿಮಿಷ ತಡವಾಗಿ ಪ್ರಯಾಣ ಬೆಳೆಸಲಿದೆ. ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16512) ರೈಲು 40 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ. ಇನ್ನು, ಮಡಗಾವ್‌ನಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸುವ ಪ್ಯಾಸೆಂಜರ್ (56641) ರೈಲು 55 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.

ಭಾಗಶಃ ರದ್ದು: ಮಂಗಳೂರಿನಿಂದ ತೆರಳುವ ಹಾಗೂ ಮಂಗಳೂರು ಸಂಪರ್ಕಿಸುವ ಎಂಟು ರೈಲುಗಳು ಭಾಗಶಃ ರದ್ದುಗೊಳ್ಳಲಿವೆ. ಮಂಗಳೂರು ಜಂಕ್ಷನ್‌ಗೆ ಆಗಮಿಸಲಿರುವ ಮುಂಬೈ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (12133) ರೈಲು ಮಾ.3ರಂದು ಸುರತ್ಕಲ್ ಬಳಿ ಭಾಗಶಃ ರದ್ದುಗೊಳ್ಳಲಿದೆ. ಸುರತ್ಕಲ್‌ನಲ್ಲಿ ರೈಲು ನಿಲುಗಡೆಯಾಗಲಿದೆ.

ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (12134) ರೈಲು ಸಂಚಾರವು ಮಂಗಳೂರು-ಸುರತ್ಕಲ್ ನಡುವೆ ಭಾಗಶಃ ರದ್ದಾಗಲಿದೆ. ಆದಾಗ್ಯೂ, ಸುರತ್ಕಲ್‌ನಿಂದ ಈ ರೈಲು ಅದೇ ದಿನ ಪ್ರಯಾಣ ಆರಂಭಿಸಲಿದೆ.

ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್  ಮತ್ಸ್ಯಗಂಧ ಎಕ್ಸ್‌ಪ್ರೆಸ್ (12620) ರೈಲು ಮಂಗಳೂರು ಸೆಂಟ್ರಲ್ ಮತ್ತು ಸುರತ್ಕಲ್ ನಡುವೆ ಭಾಗಶಃ ರದ್ದಾಗಲಿದೆ. ಆದಾಗ್ಯೂ, ಈ ರೈಲು ಅದೇ ದಿನ ಸುರತ್ಕಲ್‌ನಿಂದ ಮಧ್ಯಾಹ್ನ 3:10ರಿಂದ ಪ್ರಯಾಣ ಬೆಳೆಸಲಿದೆ.

ವಿಜಯಪುರದಿಂದ ಮಂಗಳೂರು ಜಂಕ್ಷನ್‌ನತ್ತ ಮಾ.2ರಂದು ಪ್ರಯಾಣ ಬೆಳೆಸಿರುವ ಡೈಲಿ ತತ್ಕಾಲ್ ವಿಶೇಷ ರೈಲು (07327) ಮಾ.3ರಂದು ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿದ್ದು, ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದಾಗಲಿದೆ.
ಮಂಗಳೂರು ಜಂಕ್ಷನ್‌ನಿಂದ ವಿಜಯಪುರಕ್ಕೆ ತೆರಳುವ ಡೈಲಿ ತತ್ಕಾಲ್ ವಿಶೇಷ ರೈಲು (07328) ಮಂಗಳೂರಿನ ಬದಲಾಗಿ ಕಬಕ ಪುತ್ತೂರಿನಿಂದ ಸಂಜೆ 5:35ಕ್ಕೆ ಪ್ರಯಾಣ ಆರಂಭಿಸಲಿದೆ. ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿರುವ ಗೊಮಟೇಶ್ವರ ಎಕ್ಸ್‌ಪ್ರೆಸ್ (16575) ಬಂಟ್ವಾಳ ರೈಲು ನಿಲ್ದಾಣದಲ್ಲಿ ಭಾಗಶಃ ರದ್ದಾಗಲಿದೆ.

ಮಡಗಾವ್-ಮಂಗಳೂರು ಸೆಂಟ್ರಲ್ ಡಿಇಎಂಯು ಪ್ಯಾಸೆಂಜರ್ ರೈಲು (70105) ಸಂಚಾರವು ತೋಕೂರಿನಲ್ಲಿ ಕೊನೆಗೊಳ್ಳಲಿದೆ. ಅಲ್ಲದೆ, ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲು ಸಂಚಾರ ಭಾಗಶಃ ರದ್ದುಗೊಳ್ಳಲಿದೆ.

ಮಂಗಳೂರು ಸೆಂಟ್ರಲ್- ಮಡಗಾವ್ ಡಿಇಎಂಯು ಪ್ಯಾಸೆಂಜರ್ ರೈಲು (70106) ಮಂಗಳೂರಿನ ಬದಲಾಗಿ ತೋಕೂರಿನಿಂದ ಮಧ್ಯಾಹ್ನ 3:31ಕ್ಕೆ ಸಂಚಾರ ಆರಂಭಿಸಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News