ವಾಯುಮಾಲಿನ್ಯದಿಂದ ಮಾನವನ ಆಯುಷ್ಯದಲ್ಲಿ 3 ವರ್ಷ ಕಡಿತ: ವಿಜ್ಞಾನಿಗಳ ಅಧ್ಯಯನ

Update: 2020-03-03 17:18 GMT

ಪ್ಯಾರಿಸ್, ಮಾ. 3: ವಾಯುಮಾಲಿನ್ಯವು ಜಾಗತಿಕ ಮಟ್ಟದಲ್ಲಿ ಜನರ ಆಯುಷ್ಯವನ್ನು ಸರಾಸರಿ ಮೂರು ವರ್ಷಗಳಷ್ಟು ತಗ್ಗಿಸುತ್ತದೆ ಹಾಗೂ ಪ್ರತಿ ವರ್ಷ 88 ಲಕ್ಷ ಅಕಾಲಿಕ ಮರಣಗಳಿಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಮಂಗಳವಾರ ಹೇಳಿದ್ದಾರೆ.

ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಉತ್ಪತ್ತಿಯಾಗುವ ಅಣುಗಳು ಮತ್ತು ಶ್ವಾಸಕೋಶಕ್ಕೆ ಅಂಟಿಕೊಳ್ಳುವ ಕಣಗಳನ್ನು ನಿವಾರಿಸುವ ಮೂಲಕ ಪೂರ್ಣ ಆಯುಷ್ಯವನ್ನು ಮರಳಿ ಪಡೆಯಬಹುದಾಗಿದೆ ಎಂದು ವಿಜ್ಞಾನಿಗಳು ‘ಕಾರ್ಡಿಯೊವ್ಯಾಸ್ಕುಲರ್ ರಿಸರ್ಚ್’ ಪತ್ರಿಕೆಯಲ್ಲಿ ಬರೆದಿದ್ದಾರೆ.

 ‘‘ವಾಯುಮಾಲಿನ್ಯವು ಹೊಗೆಬತ್ತಿ ಸೇವನೆಗಿಂತಲೂ ದೊಡ್ಡ ಸಾರ್ವಜನಿಕ ಆರೋಗ್ಯ ಅಪಾಯವಾಗಿದೆ’’ ಎಂದು ಲೇಖನದ ಪ್ರಧಾನ ಲೇಖಕ ಜರ್ಮನಿಯ ಮೈಂಝ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನ ಜಾಸ್ ಲಿಲೀವಲ್ಡ್ ಹೇಳುತ್ತಾರೆ.

‘‘ಭೂಮಿಯಡಿಯಲ್ಲಿ ಲಭಿಸುವ ಇಂಧನವನ್ನು ಬದಲಿಸುವ ಮೂಲಕ, ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯವನ್ನು ತಡೆಗಟ್ಟಬಹುದು’’ ಎಂದು ಅವರು ಹೇಳುತ್ತಾರೆ.

‘‘ಅಕಾಲಿಕ ಸಾವುಗಳಿಗೆ ಕಾರಣವಾಗುವ ಇತರ ಅಂಶಗಳನ್ನು ಗಮನಿಸಿದರೆ, ವಾಯುಮಾಲಿನ್ಯವು ಪ್ರತಿ ವರ್ಷ ಮಲೇರಿಯಕ್ಕಿಂತ 19 ಪಟ್ಟು, ಎಚ್‌ಐವಿ/ಏಡ್ಸ್‌ಗಿಂತ ಒಂಬತ್ತು ಪಟ್ಟು ಮತ್ತು ಮದ್ಯಪಾನಕ್ಕಿಂತ ಮೂರು ಪಟ್ಟು ಹೆಚ್ಚು ಜನರನ್ನು ಕೊಲ್ಲುತ್ತದೆ’’ ಎಂದು ಅಧ್ಯಯನ ಕಂಡುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News