ವಿದೇಶದಲ್ಲಿರುವ 17 ಭಾರತೀಯರಿಗೆ ವೈರಸ್ ಸೋಂಕು
ಹೊಸದಿಲ್ಲಿ,ಮಾ.4: ವಿದೇಶದಲ್ಲಿ 17 ಮಂದಿ ಭಾರತೀಯರು ಕೊರೋನಾ ವೈರಸ್ ಸೋಂಕು ಪೀಡಿತರಾಗಿದ್ದಾರೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.
ಲೋಕಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಮುರಳೀಧರನ್, ಜಪಾನ್‌ನಲ್ಲಿ ಪ್ರವಾಸಿ ನೌಕೆಯಲ್ಲಿದ್ದ 16 ಮಂದಿ ಹಾಗೂ ಯುಎಇನಲ್ಲಿ ಓರ್ವ ವ್ಯಕ್ತಿ ಕೊರೋನ ಪೀಡಿತ ಭಾರತೀಯರೆಂದು ಅವರು ತಿಳಿಸಿದರು.
ಕೊರೋನ ಪಿಡುಗು ವ್ಠಾಪಕವಾಗಿರುವ ಚೀನಾದಿಂದ ಭಾರತವು 723 ಭಾರತೀಯ ಪ್ರಜೆಗಳು ಹಾಗೂ 43 ವಿದೇಶಿಯರು ಸೇರಿದಂತೆ ಒಟ್ಟು 766 ಮಂದಿಯನ್ನು ತೆರವುಗೊಳಿಸಿದೆಯೆಂದು ಸಚಿವರು ತಿಳಿಸಿದರು.
ಹಾಗೆಯೇ,ಕೊರೋನ ಸೋಂಕು ಪೀಡಿತರಿದ್ದ ಜಪಾನ್‌ನ ಪ್ರವಾಸಿ ಹಡಗಿನಿಂದ 119 ಭಾರತೀಯರನ್ನು ಕರೆತರಲಾಗಿದೆಯೆಂದು ಮುರಳೀಧರನ್ ಹೇಳಿದರು.
ಚೀನಾದಿಂದ ಭಾರತೀಯರನ್ನು ತೆರವುಗೊಳಿಸಲು ಎರಡು ವಿಶೇಷ ಹಾರಾಟಗಳನ್ನು ನಡೆಸಿದ್ದಕ್ಕಾಗಿ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಯು 5.98 ಕೋಟಿ ರೂ. ಶುಲ್ಕ ವಿಧಿಸಿದೆ ಹಾಗೂ ಭಾರತೀಯ ವಾಯುಪಡೆಯ ವಿಮಾನವು ಕೊರೋನ ಸಂತ್ರಸ್ತ ಚೀನಾಗೆ ನೆರವು ಸಾಮಾಗ್ರಿಗಳನ್ನು ರವಾನಿಸಿದ ಹಾಗೂ ಮರಳಿ ಬರುವಾಗ ವೂಹಾನ್‌ನಿಂದ ಭಾರತೀಯ ನಾಗರಿಕರನ್ನು ಸ್ವದೇಶಕ್ಕೆ ಕರೆತಂದಿದೆ ಎಂದು ಅವರು ಸದನಕ್ಕೆ ತಿಳಿಸಿದರು.