ಮಾ.5 ರಂದು ಬಜೆಟ್: ನಿರೀಕ್ಷೆಯ ಕಣ್ಣಲ್ಲಿ ಕರಾವಳಿಗರು
ಮಂಗಳೂರು, ಮಾ. 4: ಕೇಂದ್ರ ಸರಕಾರದಿಂದ ಜಿಎಸ್‌ಟಿ ಪರಿಹಾರ ಬಾರದಿರುವುದು ಸೇರಿದಂತೆ ರಾಜ್ಯ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಆರು ಬಜೆಟ್‌ಗಳನ್ನು ಮಂಡಿಸಿದ್ದು, ಮಾ.5ರಂದು ಏಳನೇ ಬಜೆಟ್ ಮಂಡಿಸಲು ಕಾತುರರಾಗಿದ್ದಾರೆ. ಇತ್ತ ಕರಾವಳಿಗರ ಕಣ್ಣಲ್ಲೂ ನಿರೀಕ್ಷೆಗಳ ಮಹಾಪೂರವೇ ಹರಿಯುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಆರು ಬಜೆಟ್‌ಗಳನ್ನು ಮಂಡಿಸಿದ್ದು, ಏಳನೇ ಬಜೆಟ್ ಮಂಡಿಸಲು ಕಾತುರರಾಗಿದ್ದಾರೆ. ಕೃಷಿ ಬಜೆಟ್, ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್, ಮಠಗಳಿಗೆ ಅನುದಾನ ಸೇರಿದಂತೆ ಪ್ರತಿ ಬಜೆಟ್‌ನಲ್ಲೂ ವಿಶೇಷತೆ ಮೆರೆದಿದ್ದ ಬಿಎಸ್‌ವೈ ಅವರಿಗೆ ಏಳನೇ ಬಜೆಟ್ ಸವಾಲಿನದ್ದಾಗಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಪಾಲು ಜನಪ್ರತಿನಿಧಿಗಳು ಬಿಜೆಪಿಯವರು. ಪ್ರವಾಸೋದ್ಯಮ, ಐಟಿ ಪಾರ್ಕ್ ಸ್ಥಾಪನೆ, ಕೈಗಾರಿಕಾಭಿವೃದ್ಧಿ, ನೂತನ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ಕೆ ವೇಗ ಪಡೆಯುವ ನಿರೀಕ್ಷೆ ಇದೆ. ಇನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದು, ಕರಾವಳಿಗೆ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರಕಿಸಿ ಕೊಡಲಿದ್ದಾರೆಯೇ ಎನ್ನುವ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಬಂದರು, ವಿಮಾನ ನಿಲ್ದಾಣ, ರೈಲು, ರಸ್ತೆ ಸಹಿತ ಎಲ್ಲ ರೀತಿಯಲ್ಲೂ ಕರಾವಳಿಯನ್ನು ಸಂಪರ್ಕಿಸಲು ಹಲವು ಅವಕಾಶಕಾಶಗಳಿವೆ. ಕರಾವಳಿಯಲ್ಲಿ ಕಡಲತೀರಗಳು, ಪುರಾತನ ದೇವಸ್ಥಾನ, ಮಸೀದಿ-ದರ್ಗಾ, ಚರ್ಚ್ ಸಹಿತ ಐತಿಹಾಸಿಕ ಸ್ಮಾರಕಗಳಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಎನ್‌ಎಂಪಿಟಿ ಮೂಲಕ ಸಾವಿರಾರು ಪ್ರವಾಸಿಗರು ಕರಾವಳಿಗೆ ಭೇಟಿ ನೀಡುತ್ತಿದ್ದು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಸಾಧ್ಯತೆ ಇದೆ.
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬಜೆಟ್‌ನಲ್ಲಿ ಕರಾವಳಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದರು.
ಖಾಸಗಿ ಕೈಗಾರಿಕಾ ಸಂಸ್ಥೆಗಳಿಗೆ ಭೂಮಿ ನೀಡಿಕೆಯ ನಿಯಮ ಸರಳೀಕರಣ ಮಾಡುವುದು, ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚನೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲು ಲ್ಯಾಂಡ್‌ಬ್ಯಾಂಕ್, ಐಟಿ ಪಾರ್ಕ್ ಸ್ಥಾಪನೆ, ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಮೂಲಕ ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಅಭಿವೃದ್ಧಿಪಡಿಸುವುದು, ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಶ್ರಮಿಸುವುದಾಗಿಯೂ ಕರಾವಳಿಯ ಕೈಗಾರಿಕಾ ಉದ್ಯಮಿಗಳು, ಕೆಸಿಸಿಐ ಪದಾಧಿಕಾರಿಗಳಿಗೆ ಸಚಿವರು ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.