ಹೆಬ್ರಿ: ಉದ್ಘಾಟನೆಗೆ ಸಜ್ಜುಗೊಂಡಿದೆ ಮುದ್ರಾಡಿಯ ಬಯಲು ರಂಗಮಂದಿರ
ಹೆಬ್ರಿ, ಮಾ.4: ತಾಲೂಕಿನ ಮುದ್ರಾಡಿ ನಾಟ್ಕದೂರಿನಲ್ಲಿ ನಿರ್ಮಾಣ ಗೊಂಡಿರುವ ಸಕಲ ವ್ಯವಸ್ಥೆಯ ಭವ್ಯವಾದ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗಮಂದಿರ ಲೋಕಾರ್ಪಣೆಗೆ ಸಜ್ಜುಗೊಂಡಿದೆ.
ಮಾ.6ರಂದು ಬಯಲು ರಂಗ ಮಂದಿರದ ಉದ್ಘಾಟನೆ ನಡೆಯಲಿದೆ. ಮಂಗಳೂರಿನ ಉದ್ಯಮಿ ಡಾ.ಆರೂರು ಪ್ರಸಾದ್ ರಾವ್ ತನ್ನ ತಂದೆ ಆರೂರು ಕೃಷ್ಣಮೂರ್ತಿ ರಾವ್ ಹೆಸರಿನಲ್ಲಿ ಈ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದು ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ಕಲಾವಿದೆ ಡಾ.ಬಿ.ಜಯಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಜಿಪಂ ಸದಸ್ಯರಾಗಿದ್ದ ಮುದ್ರಾಡಿ ಮಂಜುನಾಥ ಪೂಜಾರಿ, ಸಾಹಿತಿ ಡಾ.ಡಿ.ಕೆ.ಚೌಟ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ರಂಗಮಂದಿರ ಕಟ್ಟುವ ನಮ್ಮ ಕನಸು ನನಸಾಗಲು ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಮಲೆನಾಡ ತಪ್ಪಲಿನ ಕಾನನದ ನಡುವೆ ಅತ್ಯಂತ ಸುಂದರವಾಗಿ ನಾಡಿನಲ್ಲೇ ಅಪರೂಪದ ರಂಗ ಮಂದಿರ ಎಂಬ ಖ್ಯಾತಿಗೂ ಬಯಲು ರಂಗ ಮಂದಿರ ಪಾತ್ರವಾಗಿದೆ.
ಮಲೆನಾಡ ತಪ್ಪಲಿನ ಕಾನನದ ನಡುವೆ ಅತ್ಯಂತ ಸುಂದರವಾಗಿ ನಾಡಿನಲ್ಲೇ ಅಪರೂಪದ ರಂಗ ಮಂದಿರ ಎಂಬ ಖ್ಯಾತಿಗೂ ಬಯಲು ರಂಗ ಮಂದಿರ ಪಾತ್ರವಾಗಿದೆ. ಪ್ರಕೃತಿಯ ನಡುವೆ 850 ಮಂದಿ ಕುಳಿತು ನಾಟಕ ನೋಡುವ ಗ್ಯಾಲರಿ, ಅತಿಥಿಗಳಿಗೆ ತಂಗಲು 4 ಸುಸಜ್ಜಿತ ರೂಮುಗಳು, 100 ಜನ ಕಲಾವಿದರು ಉಳಿಯುವಂತೆ ಸಕಲ ವ್ಯವಸ್ಥೆಯ ಕೊಠಡಿಗಳು, ಕುಡಿಯುವ ನೀರು, ವಿದ್ಯುತ್, ಜನರೇಟರ್, ರಂಗಭೂಮಿಯ ಅಗತ್ಯದ ಸಕಲ ಪರಿಕರಗಳನ್ನು ನಮ ತುಳುವೆರ್ ಕಲಾ ಸಂಘಟನೆಯ ನೇತಾರ ಸುಕುಮಾರ್ ಮೋಹನ್ ಹೊಂದಿಸಿದ್ದಾರೆ.
ಧರ್ಮಯೋಗಿ ಮೋಹನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುವ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯಲ್ಲಿ ಸುಕುಮಾರ್ ಮೋಹನ್ ಮತ್ತು ಅವರ ಇಡೀ ಕುಟುಂಬ ಕಲಾ ಸೇವೆಯಲ್ಲಿ ಸಂಪೂಣವಾರ್ಗಿ ತಮ್ಮನ್ನು ತೊಡಗಿಸಿಕೊಂಡಿದೆ.