ಉಡುಪಿ: ಸ್ಕೌಟ್ಸ್-ಗೈಡ್ಸ್‌ಗಳಿಗೆ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ
ಉಡುಪಿ, ಮಾ. 4: 2019-20ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕಬ್ಸ್-ಬುಲ್‌ಬುಲ್, ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ ಸಾಧಕರಿಗೆ ರಾಜ್ಯಪಾಲ ವಾಜುಬಾಯಿ ರೂಡಬಾಯಿ ವಾಲಾ ಅವರು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿದರು.
ಕಲ್ಯಾಣಪುರ ಸಂತೆಕಟ್ಟೆಯ ವೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ (ಕಬ್), ಬೈಂದೂರು ತಾಲೂಕಿನ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮತಿ (ಬುಲ್‌ಬುಲ್), ಬೈಂದೂರು ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೈವ್ (ಸ್ಕೌಟ್ಸ್), ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಪ್ರೀತಿ(ಗೈಡ್ಸ್), ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಶ್ರೀಕರ ಆರ್.ಎನ್ (ರೋವರ್) ಹಾಗೂ ಕಾರ್ಕಳ ಮಂಜುನಾಥ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಕ್ಷೀತಾ (ರೇಂಜರ್) ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯ ಹಾಗೂ ಇತರ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತೆ ಶಾಂತಾ ವಿ.ಆಚಾರ್ಯ ಹಾಗೂ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.