ಪುತ್ತೂರು ನಗರಸಭೆಯಲ್ಲಿ ತ್ವರಿತ ಸೇವೆಗಾಗಿ `ಮೆಗ್ಗಿಸ್' ತಂತ್ರಾಂಶ ಅನುಷ್ಟಾನ
ಪುತ್ತೂರು: ಜಿಲ್ಲೆಯ ಎರಡನೇ ಅತೀ ದೊಡ್ಡ ವಾಣಿಜ್ಯ ಪಟ್ಟಣ ಹಾಗೂ ಭವಿಷ್ಯದ ಜಿಲ್ಲಾ ಕೇಂದ್ರವಾದ ಪುತ್ತೂರಿನಲ್ಲಿ ಸ್ಥಳೀಯಾಡಳಿತ ನಗರಸಭೆಯು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ಯೋಜನೆಯಂತೆ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ತರುವ `ಮೆಗ್ಗಿಸ್' ಎನ್ನುವ ತಂತ್ರಾಂಶವನ್ನು ಅನುಷ್ಟಾನಗೊಳಿಸಲಿದೆ.
ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅದರಲ್ಲಿ ರಸ್ತೆ ಕಡಿತ, ಯೂಸರ್ ಮೆನೇಜ್‍ಮೆಂಟ್, ಜಲನಿಧಿ ಮತ್ತು ಸ್ವೀಕೃತಿ ತಂತ್ರಾಂಶಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಕಟ್ಟಡ ಪರವಾನಿಗೆ, ಇ ಆಸ್ತಿ ಸಹಿತ ಎಲ್ಲಾ ತಂತ್ರಾಂಶಗಳು ಮೆಗ್ಗಿಸ್ ವ್ಯಾಪ್ತಿಗೆ ಬರಲಿವೆ. ಸಾರ್ವಜನಿಕರಿಗೆ ದೂರು ಸಲ್ಲಿಸಲು ಕೂಡಾ ಈ ತಂತ್ರಾಂಶವು ಲಭ್ಯವಾಗಲಿದೆ. ಸೇವೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರತ್ಯೇಕ ತಂತ್ರಾಂಶಗಳನ್ನು ಬಳಕೆ ಮಾಡುವ ಪ್ರಮೇಯವನ್ನು ಮೆಗ್ಗಿಸ್ ತಂತ್ರಾಂಶ ತಪ್ಪಿಸಲಿದೆ. ನಾಗರಿಕರು ಈ ತಂತ್ರಾಂಶದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡರೆ ಅವರಿಗೆ ಮೆಗ್ಗಿಸ್ ತಂತ್ರಾಂಶ ಬಳಕೆ ಸಾಧ್ಯವಾಗುತ್ತದೆ.
ಒಂದೇ ಸೂರಿನಡಿ ಇ ಆಡಳಿತ ವ್ಯವಸ್ಥೆ ಲಭ್ಯವಾಗುವಂತೆ ಪೌರಾಡಳಿತ ನಿರ್ದೇಶನಾಲಯವು ಕ್ರಮ ಕೈಗೊಳ್ಳುವ ಕುರಿತು ಪುತ್ತೂರಿನ ಉದ್ಯಮಿ ರಾಮಚಂದ್ರ ಪ್ರಭು ಎಂಬವರು ಸಲ್ಲಿಸಿದ ಮನವಿಗೆ ಉತ್ತರ ನೀಡಿದೆ. ಸಾರ್ವಜನಿಕರ ಕಚೇರಿ ಅಲೆದಾಟವನ್ನು ತಪ್ಪಿಸುವ ದೃಷ್ಟಿಯಿಂದ ನಗರಸಭೆಯ ವಿವಿಧ ಸೇವೆಗಳು ಇ ಆಡಳಿತದ ಮೂಲಕ ಲಭ್ಯವಾಗಬೇಕು ಎಂಬ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿಗಳ ಇ ಆಡಳಿತ ಸಲಹೆಗಾರ ಬೇಲೂರು ಸುದರ್ಶನ ಅವರ ಗಮನಕ್ಕೂ ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತರು ತಂದಿದ್ದರು.
ತ್ವರಿತ ಸ್ಪಂದನೆ
ಪುತ್ತೂರು ನಗರಸಭೆಯೂ ಸೇರಿದಂತೆ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಸೇವಾ ಸೌಲಭ್ಯವು ದೊರೆಯುವ ಮೆಗ್ಗಿಸ್ ( ಮುನ್ಸಿಪಲ್ ಇ ಗೌರರ್ನೆನ್ಸ್ ಇಂಟಿಗ್ರೇಟೆಡ್ ಸಾಪ್ಟ್‍ವೇರ್ ) ತಂತ್ರಾಂಶವನ್ನು ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರುವ ಕುರಿತು ಮುಖ್ಯಮಂತ್ರಿಗಳ ಇ ಆಡಳಿತ ಸಲಹೆಗಾರ ಬೇಲೂರು ಸುದರ್ಶನ ಅವರು ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇವರ ಮನವಿಗೆ ತ್ವರಿತ ಸ್ಪಂದನ ಮಾಡಿದ್ದರು.
ಒಂದೇ ಸೂರಿನಡಿ
ಮೆಗ್ಗಿಸ್ ತಂತ್ರಾಂಶದ ಅನುಷ್ಟಾನದಿಂದ ಪುತ್ತೂರಿನ ನಾಗರಿಕರಿಗೆ ನಗರಸಭೆಯಲ್ಲಿ ಲಭ್ಯವಿರುವ ವಿವಿಧ ಸೇವೆಗಳು ಒಂದೇ ಸೂರಿನಡಿ ಸಿಗುವಂತಾಗುತ್ತದೆ. ಆಡಳಿತ ಯಂತ್ರ ಚುರುಕುಗೊಳಿಸಲು ಮತ್ತು ಇ ಆಡಳಿತದ ಪರಿಣಾಮಕಾರಿ ಅನುಷ್ಟಾನಕ್ಕೆ ಇದು ಸಹಕಾರಿಯಾಗಲಿದೆ.
ರೂಪಾ ಟಿ ಶೆಟ್ಟಿ, ಪೌರಾಯುಕ್ತೆ. ನಗರಸಭೆ ಪುತ್ತೂರು.
ನಾಗರಿಕರಿಗೆ ಅನುಕೂಲ
ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಪಾರದರ್ಶಕ ಮತ್ತು ತ್ವರಿತ ಸೇವೆಗಳು ನಾಗರಿಕರಿಗೆ ಲಭ್ಯವಾಗಲು ಮೆಗ್ಗಿಸ್ ತಂತ್ರಾಂಶ ಅನುಕೂಲಕರವಾಗಿದೆ. ಹಿರಿಯ ನಾಗರಿಕರ ಸಹಿತ ಎಲ್ಲರೂ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ. ಮತ್ತು ಜನಸ್ನೇಹಿ ಆಡಳಿತ ನೀಡಲು ಇದು ಸಹಕಾರಿಯಾಗಿದೆ.
ಡಿ.ಕೆ ಭಟ್, ಸಂಚಾಲಕರು ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು.